ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಅವರಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತಿವೆ ಆದ್ದರಿಂದ ಮಕ್ಕಳು ಮೊಬೈಲ್, ಟಿವಿಗಳಿಂದ ದೂರವಿರಬೇಕು ಎಂದು ದಿವಾಣಿ ನ್ಯಾಯಾಧೀಶ ಸಿ. ಎಸ್.ಶಿವನಗೌಡರ ಹೇಳಿದರು.
ಗದಗ: ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಅವರಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗುತ್ತಿವೆ ಆದ್ದರಿಂದ ಮಕ್ಕಳು ಮೊಬೈಲ್, ಟಿವಿಗಳಿಂದ ದೂರವಿರಬೇಕು ಎಂದು ದಿವಾಣಿ ನ್ಯಾಯಾಧೀಶ ಸಿ. ಎಸ್.ಶಿವನಗೌಡರ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 10ರಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಸಹಯೋಗದಲ್ಲಿ ಜರುಗಿದ ಜಿಲ್ಲಾಮಟ್ಟದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನಗಳಲ್ಲಿ ಇಂತಹ ಶಿಬಿರಗಳ ಅವಶ್ಯಕತೆ ಹೆಚ್ಚಿದೆ. ಹಿಂದಿನ ದಿನಗಳಲ್ಲಿ ಮೊಬೈಲ್, ಟಿವಿ ಇರುತ್ತಿರಲಿಲ್ಲ ಇದರಿಂದ ಮಕ್ಕಳು ಪ್ರಕೃತಿಯಲ್ಲಿ ಬೆರೆತು ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಂಡು ಕ್ರಿಯಾಶೀಲರಾಗಿ, ಸದೃಢವಾಗಿ ಇರುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಮಕ್ಕಳು ಟಿವಿ ಹಾಗೂ ಮೊಬೈಲ್‌ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಅವರಲ್ಲಿ ಸಾಕಷ್ಟು ಖಿನ್ನತೆಗಳು ಕಾಣಸಿಗುತ್ತವೆ. ಮಕ್ಕಳು ಓದಿನ ಜೊತೆಗೆ ತಮ್ಮ ಆಸಕ್ತಿಯುತವಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮನಸ್ಸು ಮತ್ತು ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕಾಗಿದೆ. ಮನೆಯಲ್ಲಿ ತಂದೆ-ತಾಯಿಗಳಿಗೆ ಸಹಾಯ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ ಮಾತನಾಡಿ, ಮಕ್ಕಳು ಬೇಸಿಗೆ ಶಿಬಿರದ ಮಹತ್ವವನ್ನು ಮೊದಲು ತಿಳಿದುಕೊಳ್ಳಬೇಕು. ಮಕ್ಕಳಲ್ಲಿ ಪಠ್ಯದೊಂದಿಗೆ ಕಲಾಸಕ್ತಿ ಮೂಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾಗೂ ಜಿಲ್ಲಾ ಬಾಲಭವನ ಸಮಿತಿಯಿಂದ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಶೇಷವಾಗಿ ರೇನ್ ಡ್ಯಾನ್ಸ್, ದೇಸಿ ಆಟಗಳು, ಮಣ್ಣಿನ ಆಟಗಳು, ತಾರಾಲಯ ವೀಕ್ಷಣೆ ಸೇರಿದಂತೆ ಹಲವಾರು ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಇಲ್ಲಿ ಕಲಿತಿರುವ ವಿಷಯಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಯಶ್ರೀ ಆರ್. ಮಾತನಾಡಿ, ಬಾಲಭವನ ಸಮಿತಿಯಿಂದ ಪ್ರತಿ ವರ್ಷ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡು ಬರುತ್ತಿದೆ. 5 ರಿಂದ 16 ವರ್ಷಗಳ ಮಕ್ಕಳಿಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 15 ದಿನಗಳ ವರೆಗೆ ನಡೆಯುವ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳೊಂದಿಗೆ ಮನೋವಿಕಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸುವ ಕೆಲಸ ಈ ಶಿಬಿರ ಮಾಡುತ್ತಿದೆ ಎಂದರು.
ಪ್ರಭಾರ ಬಿಇಒ ಎಸ್.ಪಿ. ಪ್ರಭಯ್ಯನಮಠ, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ ಗಡಾದ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಧೀಕ್ಷಕಿ ಲಕ್ಷ್ಮೀ ಜಿಂಗಿ ಮಾತನಾಡಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದೇವೇಂದ್ರಕುಮಾರ ಹೊಸಕೇರಿ ಅವರು ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ, ರವಿ ಉಮಚಗಿ ಅವರು ಯೋಗ, ಅಶ್ವಿನಿ ಚವಡಿ ಅವರು ಕರಾಟೆ, ಚೇತನಾ ಶಿದ್ಲಿಂಗ ಅವರು ಜ್ಯುವೆಲ್ಲರಿ ಮತ್ತು ಮೆಹಂದಿ, ವಂದನಾ ನಾಗನೂರ ಅವರು ಚಿತ್ರಕಲೆ ಮತ್ತು ಕರಕುಶಲ ಕಲೆ, ವರ್ಷ ಕಲಕಂಬಿ ಶಾಸ್ತ್ರೀಯ ಸಂಗೀತವನ್ನು ಮಕ್ಕಳಿಗೆ ಹೇಳಿಕೊಡಲಿದ್ದಾರೆ. ರವಿ ಉಮಚಗಿ ಅವರು ನಿರೂಪಿಸಿದರು. ಇದಕ್ಕೂ ಮುನ್ನ ಡಾ. ರಾಜೇಂದ್ರ ಗಡಾದ ಅವರು ಮಕ್ಕಳಿಗೆ ಗದುಗಿನ ವಿಶೇಷತೆ, ಹಿರಿಯ ಕವಿಗಳು ಮತ್ತು ಸಾಹಿತಿಗಳ ಬಗ್ಗೆ ಪ್ರಶ್ನಾವಳಿ ಮಾಡುವ ಮೂಲಕ ಮಕ್ಕಳಿಗೆ ಶಿಬಿರದ ಬಗ್ಗೆ ಆಸಕ್ತಿ ಮೂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.