ಸೇತುಬಂಧ ತರಬೇತಿ ಕಾರ್‍ಯಕ್ರಮ
ಸಾಗರ: ಇವತ್ತಿನ ಸಂದರ್ಭದಲ್ಲಿ ಶಿಕ್ಷಣಕ್ಕೆ ಬೇಕಾದ ಸವಲತ್ತುಗಳು ಎಲ್ಲ ದಿಕ್ಕಿನಿಂದಲೂ ಸಿಗುತ್ತಿದೆ. ಅದನ್ನು ಉಪಯೋಗಿಸಿಕೊಂಡು ಉನ್ನತ ಶಿಕ್ಷಣ ಪಡೆಯುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲೆ ಇದೆ ಎಂದು ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಹೇಳಿದರು.
ಪಟ್ಟಣದ ಭಾರತೀತೀರ್ಥ ಸಭಾಭವನದಲ್ಲಿ ಧಾಡವಾಡದ ವಿದ್ಯಾಪೋಷಕ್ ವತಿಯಿಂದ ಏರ್ಪಡಿಸಿದ್ದ ಐದು ದಿನಗಳ ಸೇತುಬಂಧ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ಮುಂದುವರಿಸಲು ಅಗತ್ಯ ಸಹಕಾರವನ್ನು ವಿದ್ಯಾಪೋಷಕ್ ಮಾಡಿಕೊಂಡು ಬರುತ್ತಿದೆ. ಇಂತಹ ಸಂಸ್ಥೆಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರು.ಸಂಸ್ಥೆಯಿಂದ ಸಹಕಾರ ಪಡೆದ ಮಕ್ಕಳು ಉತ್ತಮ ಸ್ಥಾನಕ್ಕೆ ಹೋಗುವ ಜೊತೆಗೆ ತಾವು ಉನ್ನತ ಸ್ಥಾನಕ್ಕೆ ಹೋದಾಗ ಇತರರಿಗೆ ನಿಮ್ಮ ನೆರವು ನೀಡುವ ಸಂಕಲ್ಪ ಕೈಗೊಳ್ಳಬೇಕು. ಕೇವಲ ಹಣಕಾಸಿನ ನೆರವು ನೀಡಿ ಕೈತೊಳೆದುಕೊಳ್ಳದೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ತರಬೇತಿಯನ್ನು ಸಹ ವಿದ್ಯಾಪೋಷಕ್ ನೀಡುವ ಮೂಲಕ ಗಮನಾರ್ಹ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ವಿದ್ಯಾಪೋಷಕ್ ಜಿಲ್ಲಾ ಸಂಚಾಲಕ ಅಶ್ವಿನಿಕುಮಾರ್ ಮಾತನಾಡಿ, ವಿದ್ಯಾಪೋಷಕ್ ಧಾರವಾಡದಲ್ಲಿ ಕೇಂದ್ರ ಸ್ಥಾನ ಹೊಂದಿದ್ದರೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ದ್ವಿತೀಯ ಪಿಯುಸಿ ನಂತರ ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಆರ್ಥಿಕ ಸಹಕಾರ ಮಾಡುವ ಜೊತೆಗೆ ಇಂತಹ ತರಬೇತಿ ನೀಡಿ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜುಗೊಳಿಸುತ್ತಿದೆ. ಐದು ದಿನಗಳ ಶಿಬಿರದಲ್ಲಿ ರಾಜ್ಯದ ಬೇರೆಬೇರೆ ಜಿಲ್ಲೆಗಳ ೬೪ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಇಲ್ಲಿ ಪಡೆದ ತರಬೇತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮ.ಸ.ನಂಜುಂಡಸ್ವಾಮಿ, ಗಣಪತಿ ಹೆನಗೆರೆ, ಎ.ಎಂ.ನಾಯಕ್ ಇದ್ದರು. ದಿವ್ಯಶ್ರೀ ವಂದಿಸಿದರು. ಬಿಂದು ಹೆಗಡೆ ನಿರೂಪಿಸಿದರು.