ಸೋರುವ ಶಾಲೆಗಳಿಗೆ ಮಕ್ಕಳಿಗೆ ಸ್ವಾಗತ!- ಇಂದಿನಿಂದ ಶುರು ಶಾಲೆ

KannadaprabhaNewsNetwork | Published : May 29, 2024 12:47 AM

ಸಾರಾಂಶ

ಬೇಸಿಗೆ ರಜೆಯಲ್ಲಿ ಶಾಲೆಗಳ ದುರಸ್ತಿಯನ್ನೇ ಮಾಡದ ಸರ್ಕಾರ. ಆತಂಕದಲ್ಲೇ ಶಾಲೆಗೆ ಬರುವ ಸ್ಥಿತಿ ಮಕ್ಕಳದ್ದು

ಬೇಸಿಗೆ ರಜೆ ಮುಗಿದ ಬಳಿಕ ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ರೀ ಓಪನ್ ಆಗಿವೆ. ಆದರೆ ಬಹುತೇಕ ಶಾಲೆಗಳಲ್ಲಿ ಮಳೆ ಬಂದ್ರೆ ಸಾಕು ಚಾವಣಿಗಳ ಮೂಲಕ ನೀರು ಸೋರುತ್ತಿವೆ. ಬೇಸಿಗೆ ರಜೆಯಲ್ಲಿ ಇವನ್ನೆಲ್ಲ ದುರಸ್ತಿ ಮಾಡಿಸಬೇಕಿದ್ದ ಸರ್ಕಾರ ಲೋಕಸಭಾ ಚುನಾವಣೆಯಲ್ಲೇ ಕಾಲ ಕಳೆಯಿತು. ಆದರೆ, ಈಗ ರಜೆಯ ಕಾಲಾವಧಿ ಮುಗಿದಿದ್ದು, ಶಾಲೆಗಳು ಆರಂಭವಾಗಿವೆ. ಗ್ರಾಮೀಣ ಭಾಗದ ಹಾಗೂ ಬಡವರ ಮಕ್ಕಳು ಸೋರುವ ಶಾಲೆಯಲ್ಲೇ ಪಾಠ ಕಲಿಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.

--------------

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಇಂದಿನಿಂದ (ಮೇ 29) ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲಿವೆ. ಮಕ್ಕಳೆಲ್ಲ ಸಂಭ್ರಮದಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ಮಳೆಗಾಲವೂ ಆರಂಭವಾಗಲಿರುವುದರಿಂದ ಸರ್ಕಾರಿ ಶಾಲೆಯ ಮಕ್ಕಳು ಮಾತ್ರ ಆತಂಕದಲ್ಲೇ ಬರಬೇಕಾದ ಸ್ಥಿತಿ ವಿಜಯಪುರದ ಕೆಲವು ಶಾಲೆಗಳಲ್ಲಿ ನಿರ್ಮಾಣವಾಗಿದೆ.

ಏಕೆಂದರೆ ಮಳೆಗಾಲದ ಈ ಸಮಯದಲ್ಲಿ ಶಾಲಾ ಕೊಠಡಿಗಳು ಸೋರುತ್ತಿವೆ. ಮಾತ್ರವಲ್ಲ, ಸರ್ಕಾರಿ ಶಾಲೆಗಳಲ್ಲಿನ ಹಲವಾರು ಕೊಠಡಿಗಳ ಛಾವಣಿಗಳು ಶಿಥಿಲಗೊಂಡಿದ್ದು, ದುರಸ್ತಿ ಆಗಬೇಕಿವೆ. ಇನ್ನೂ ಕೆಲವು ಕಡೆಗಳಲ್ಲಿ ಶಿಥಿಲಗೊಂಡ ಕೊಠಡಿಗಳಲ್ಲೇ ಪಾಠ ಆಲಿಸುವ ಪರಿಸ್ಥಿತಿ ಮಕ್ಕಳದ್ದಾಗಿದೆ. ಹೀಗಾಗಿ ಇದು ಯಾವಾಗ ಅನಾಹುತ ತರುತ್ತದೆ ಎಂಬ ಆತಂಕ ಮಕ್ಕಳು ಮತ್ತು ಪೋಷಕರನ್ನು ಕಾಡುತ್ತಲೇ ಇದೆ.

ಸರ್ಕಾರಿ ಶಾಲೆಗಳ ಪರಿಸ್ಥಿತಿ ಅಯೋಮಯ:

ನಗರದ ಜಾಮಿಯಾ ಮಸಜೀದ್ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಕನ್ನಡ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ನಂಬರ್ 4ರಲ್ಲಿ ಪರಿಸ್ಥಿತಿ ಕೇಳುವ ಹಾಗೆಯೇ ಇಲ್ಲ. ಇಲ್ಲಿನ ನಾಲ್ಕು ಕೊಠಡಿಗಳಲ್ಲಿ ಎರಡು ಕೊಠಡಿಗಳು ಸಂಪೂರ್ಣವಾಗಿ ಸೋರುತ್ತಿವೆ. ಸ್ವಲ್ಪವೇ ಮಳೆಯಾದರೂ ಸಾಕು ತೊಟ್ಟಿಕ್ಕುವ ಕೊಠಡಿಗಳಲ್ಲಿ ಮಕ್ಕಳು ಕುಳಿತುಕೊಳ್ಳದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿಯೇ ಮಕ್ಕಳು ಪಾಠ ಕೇಳುವ ಪರಿ ಇದೆ. ಇದನ್ನು ದುರಸ್ತಿ ಮಾಡುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಏನೇ ಮನವಿ ಮಾಡಿದರೂ ಇದರತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎನ್ನುತ್ತಿಲ್ಲ.

ಕೊಠಡಿಗಳ ಹಸ್ತಾಂತರ:

ಕೊಠಡಿಗಳ ಅಭಾವದಿಂದ ಸದ್ಯಕ್ಕೆ ನಮ್ಮ ಸರ್ಕಾರಿ ಮಾದರಿ ಕನ್ನಡ ಹೆಣ್ಣುಮಕ್ಕಳ ಪ್ರಾಥಮಿಕ ಶಾಲೆ ನಂಬರ್ 4 ಕಟ್ಟಡವನ್ನು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ 8ಕ್ಕೆ ಕೊಡಲಾಗಿದೆ. ಉರ್ದು ಶಾಲೆಯ 1ರಿಂದ 7ನೇ ತರಗತಿಯವರೆಗಿನ 80 ಮಕ್ಕಳು ಇಂತಹ ಶಿಥಿಲಾವಸ್ಥೆಯ ಕೊಠಡಿಗಳಲ್ಲಿಯೇ ಪಾಠ ಆಲಿಸುತ್ತಿದ್ದಾರೆ.

ನಾಲ್ಕರಲ್ಲಿ ಎರಡು ಮಾತ್ರ ಉಪಯೋಗಕ್ಕೆ:

ಇರುವ ನಾಲ್ಕು ಕೊಠಡಿಗಳಲ್ಲಿ ಎರಡು ಕೊಠಡಿಗಳಲ್ಲಿ ಮಳೆ ಬಂದರೆ ಸಾಕು ನೀರು ತೊಟ್ಟಿಕ್ಕಲು ಶುರು ಮಾಡುತ್ತವೆ. ಇನ್ನುಳಿದ ಎರಡು ಕೊಠಡಿಗಳಲ್ಲಿ ಒಂದನ್ನು ಕಚೇರಿಯನ್ನಾಗಿಸಿಕೊಂಡಿದ್ದು, ಕೇವಲ ಒಂದು ಕೊಠಡಿಯಲ್ಲಿ ಮಕ್ಕಳನ್ನು ಕೂರಿಸಿ ನಾಲ್ವರು ಶಿಕ್ಷಕರು ಒಂದೇ ಕಡೆ ಪಾಠ ಮಾಡುತ್ತಾರೆ.

ಗ್ಯಾರಂಟಿಗಳನ್ನು ಕೊಡುವ ಮೂಲಕ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳ ಹಿತ ಕಾಪಾಡುವುದನ್ನೇ ಮರೆತಂತಿದೆ ಎಂಬ ಆರೋಪ ಕೂಡ ಈಗೀಗ ಕೇಳಿಬರುತ್ತಿದೆ. ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಇಂತಹ ಸಮಸ್ಯೆಗಳಿದ್ದರೂ ಅವುಗಳನ್ನು ದುರಸ್ತಿ ಮಾಡಿ ಮಕ್ಕಳ ಭದ್ರತೆಗಾಗಿ ಕೆಲಸ ಮಾಡುವ ಮನಸು ಅಧಿಕಾರಿಗಳಿಗೆ ಇದ್ದಂಗಿಲ್ಲ ಎಂದು ಜನ ದೂರುತ್ತಿದ್ದಾರೆ.

-------------ಪಾಠ ಕಲಿಯಲೆಂದು ಮಕ್ಕಳನ್ನು ಶಾಲೆಗೆ ಕಳಿಸಿದರೆ ವಾಪಸ್‌ ಮನೆಗೆ ಬರುತ್ತಾರೋ ಇಲ್ಲವೋ ಎಂಬ ಆತಂಕವಿದೆ. ಕೊಠಡಿಗಳು ಶಿಥಿಲಗೊಂಡಿದ್ದು, ಮಳೆನೀರು ಸೋರುತ್ತದೆ. ಯಾವಾಗ ಚಾವಣಿ ಕುಸಿದು ಮಕ್ಕಳ ಮೇಲೆ ಬೀಳುತ್ತದೋ ಎಂಬ ಭಯ ಎಲ್ಲ ಪಾಲಕರಿಗೆ ಇದೆ. ದಯಮಾಡಿ ಸರ್ಕಾರ ಶಾಲಾ ಕೊಠಡಿಗಳನ್ನು ಮೊದಲು ದುರಸ್ತಿ ಮಾಡುವ ಕೆಲಸ ಮಾಡಬೇಕಿದೆ.

- ಆಸೀಫ್, ಪಾಲಕರು.-------------ನಮಗೆ ಸರಿಯಾದ ಕೊಠಡಿಗಳು ಇಲ್ಲದ ಕಾರಣ 4 ನಂಬರ್ ಶಾಲೆಯ ಕೊಠಡಿಗಳನ್ನು ನೀಡಿದ್ದಾರೆ. ಆದರೆ ಅವು ಸಹ ಸೋರುತ್ತಿರುವುದರಿಂದ ಮಳೆಗಾಲದಲ್ಲಿ ಮಕ್ಕಳಿಗೆ ಅನಾನುಕೂಲವಾಗಲಿದೆ. ಈ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ಗಮನಕ್ಕೆ ತಂದಿದ್ದೇವೆ. ಶಾಲೆಗಳನ್ನು ದುರಸ್ತಿಗೊಳಿಸುವ ಭರವಸೆ ನಮ್ಮ ಮೇಲಾಧಿಕಾರಿಗಳಿಂದ ನಮಗೆ ಬಂದಿದೆ.

- ಅಬ್ದುಲಸತ್ತಾರ್ ಕಾಲೇಬಾಗ, ಮುಖ್ಯಗುರುಗಳು, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ 8.

Share this article