ಶಾಲೆ ಪ್ರಾರಂಭೋತ್ಸವ ಖುಷಿಯಿಂದ ಹೆಜ್ಜೆ ಹಾಕಿದ ಚಿಣ್ಣರು

KannadaprabhaNewsNetwork | Published : Jun 1, 2024 12:45 AM

ಸಾರಾಂಶ

ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಪುನರಾರಂಭಗೊಂಡಿದ್ದು, ಮಕ್ಕಳು ಶುಕ್ರವಾರ ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ ತುಮಕೂರುಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಪುನರಾರಂಭಗೊಂಡಿದ್ದು, ಮಕ್ಕಳು ಶುಕ್ರವಾರ ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಿದರು.

ಸರ್ಕಾರಿ ಶಾಲೆಗಳನ್ನು ವಿವಿಧ ಹೂವುಗಳಿಂದ ಸಿಂಗಾರಗೊಳಿಸಿ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ಆಚರಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಸಿಹಿ ತಿಂಡಿ ನೀಡಿ ಶಾಲೆಗಳಿಗೆ ಸ್ವಾಗತಿಸಲಾಯಿತು. 2024-25 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭವಾಗಿದ್ದು, ಮಕ್ಕಳು ಶಾಲೆಗೆ ಬರುವ ಮೊದಲ ದಿನವಾದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಸಿಹಿಯೂಟ ಬಡಿಸಲಾಯಿತು. ಕಳೆದ ಒಂದೂವರೆ ತಿಂಗಳಿನಿಂದ ರಜೆ ಇದ್ದ ಕಾರಣ ಶಾಲೆಗಳನ್ನು ಸ್ವಚ್ಛಗೊಳಿಸಿ ಬಾಳೆಕಂದು, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಶಾಲೆಗಳು ಸರ್ವಾಲಂಕೃತಗೊಂಡಿರುವುದನ್ನು ಮಕ್ಕಳು ನೋಡಿ ಖುಷಿಯಿಂದಲೇ ಶಾಲಾ ಕೊಠಡಿಗಳಿಗೆ ತೆರಳಿದರು. ಕೆಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚಿ, ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ನಗರದ ಅಗ್ರಹಾರ, ಮರಳೂರು ದಿಣ್ಣೆ, ಎಂ.ಜಿ. ರಸ್ತೆ. ಆರ್ಯಬಾಲಿಕಾ ಶಾಲೆ, ಮೆಳೇಕೋಟೆ, ಗಂಗಸಂದ್ರ ಸೇರಿದಂತೆ ಜಿಲ್ಲೆಯ 10 ತಾಲೂಕುಗಳಲ್ಲೂ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣದೊಂದಿಗೆ ಶಾಲೆಗಳನ್ನು ಪ್ರಾರಂಭಿಸಲಾಯಿತು. ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.

ನಗರದ ಮರಳೂರಿನಲ್ಲಿರುವ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನ ದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ಪ್ರವೀಣ್‌ಕುಮಾರ್, ಶಿಕ್ಷಕರಾದ ಚಂದ್ರಶೇಖರ್, ವಾಣಿತರಾಣಿ, ಸುಜಾತ, ಪ್ರತಿಭಾ, ಗಿರಿಜಮ್ಮ, ರಮಾದೇವಿ ಹಾಗೂ ಎಸ್‌ಡಿಎಂಸಿ ಸದಸ್ಯರುಗಳು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿಗಳಿಂದ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಗರದ ಶಿರಾ ಗೇಟ್ ಬಳಿಯಿರುವ ಉತ್ತರ ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ1 ರಿಂದ 8ನೇ ತರಗತಿ ಮಕ್ಕಳಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ ಮಾಡಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿ, ಶಾಲಾ ಪ್ರಾರಂಭದ ಮೊದಲ ದಿನವಾದ್ದರಿಂದ ಮಧ್ಯಾಹ್ನದ ಬಿಸಿಯೂಟದಲ್ಲಿ ಮಕ್ಕಳಿಗೆ ಸಿಹಿ ನೀಡಬೇಕು. ಮಕ್ಕಳಿಗೆ ನೀಡುವ ಊಟ ಗುಣಮಟ್ಟ ಹಾಗು ಪೌಷ್ಟಿಕತೆಯಿಂದ ಕೂಡಿರಬೇಕು. ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಈ ದಿನವೇ ವಿತರಿಸಬೇಕು ಎಂದು ಶಾಲಾ ಮುಖ್ಯೋಪಾಧ್ಯಾಯ ಡಿ.ಎಸ್. ಶಿವಸ್ವಾಮಿಗೆ ನಿರ್ದೇಶನ ನೀಡಿದರು.ಇಲಾಖೆಯಿಂದ ಸರಬರಾಜಾದ ಪಠ್ಯಪುಸ್ತಕ ದಾಸ್ತಾನು, ಸಮವಸ್ತ್ರ, ಅಡುಗೆ ಕೋಣೆ, ಶಾಲಾ ಕೊಠಡಿಗಳನ್ನು ಪರಿಶೀಲಿಸಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಡಯಟ್ ಪ್ರಿನ್ಸಿಪಾಲ್ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ, ಡಿವೈಪಿಸಿ ರಂಗಧಾಮಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಓಬಯ್ಯ, ಶಿಕ್ಷಣಾಧಿಕಾರಿ(ಅಕ್ಷರ ದಾಸೋಹ) ಸುಧಾಕರ್, ಮತ್ತಿತರರು ಉಪಸ್ಥಿತರಿದ್ದರು. ಊರುಕೆರೆ ಶಾಲೆಗೆ ಭೇಟಿ ಬಿಸಿಯೂಟ ಪರಿಶೀಲನೆ: ನಗರದ ಹೊರವಲಯದಲ್ಲಿರುವ ಊರುಕೆರೆ ಸರ್ಕಾರಿ ಪದವಿ ಪೂರ್ವ (ಪ್ರೌಢಶಾಲಾ ವಿಭಾಗ) ಕಾಲೇಜಿಗೆ ಮಧ್ಯಾಹ್ನ ಭೇಟಿ ನೀಡಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲಿಸಿದರು. ಮೊದಲ ದಿನದ ಊಟದಲ್ಲಿ ಸಿಹಿಯೂಟ ಪಾಯಸ ಬಡಿಸಿದ್ದನ್ನು ಗಮನಿಸಿದ ಅವರು ವಾರದಲ್ಲಿ 2 ದಿನ ಮೊಟ್ಟೆ,3 ದಿನ ರಾಗಿ ಮಾಲ್ಟ್ ನೀಡಬೇಕು. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಬೇಕೆಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಿರಿಜಮ್ಮಗೆ ಸೂಚನೆ ನೀಡಿದರು.ಮಕ್ಕಳ ಊಟಕ್ಕೂ ಮೊದಲು ಕೈ ತೊಳೆಯಲು ಸಾನೂನಿನ ವ್ಯವಸ್ಥೆ ಮಾಡಬೇಕು. ಅಡುಗೆ ಮಾಡುವವರು ಹಾಗೂ ಊಟ ಬಡಿಸುವವರು ತಮ್ಮ ತಲೆಗೆ ಗವಸು ಧರಿಸಬೇಕು. ಮಕ್ಕಳ ಊಟದ ತಟ್ಟೆಯನ್ನು ಸ್ವಚ್ಛವಾಗಿ ತೊಳೆಯಬೇಕೆಂದು ಅಡುಗೆ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. ಶಿಕ್ಷಕರು ಬೋಧಿಸಿದ ಪಠ್ಯವನ್ನು ಆಸಕ್ತಿಯಿಂದ ಕಲಿತು ಉನ್ನತ ಮಟ್ಟವನ್ನು ತಲುಪಬೇಕೆಂದು ಕಿವಿಮಾತು ಹೇಳಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ: ಜೂನ್ 14 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ನಡೆಯಲಿದ್ದು, ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಇನ್ನೂ ಹೆಚ್ಚಿನ ಅಂಕ ಗಳಿಸ ಬಯಸುವ ವಿದ್ಯಾರ್ಥಿಗಳಿಗಾಗಿ ಜೂನ್ 13 ರವರೆಗೆ ಆಯಾ ಶಾಲೆಗಳಲ್ಲಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲಾಗುತ್ತಿದೆ. ಬೇರೆ ಶಾಲೆಗಳಲ್ಲಿ ಓದಿದ್ದರೂ ಪ್ರಸ್ತುತ ವಾಸವಿರುವ ಸ್ಥಳಕ್ಕೆ ಸಮೀಪವಿರುವ ಪ್ರೌಢಶಾಲೆಯಲ್ಲಿ ಹಾಜರಾಗಿ ಪರಿಹಾರ ಬೋಧನೆಯ ಸೌಲಭ್ಯ ಪಡೆಯಬಹುದಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ಮನವಿ ಮಾಡಿದ್ದಾರೆ.

Share this article