ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾದ್ಯಂತ ಶಾಲೆಗಳು ಆರಂಭವಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸುಮಾರು 2 ತಿಂಗಳು ಬೇಸಿಗೆ ರಜೆಯಲ್ಲಿ ಮಜಾ ಮಾಡಿದ ಮಕ್ಕಳು ಶಾಲೆಗೆ ಆಗಮಿಸಿ ಸಹಪಾಠಿಗಳೊಂದಿಗೆ ಅನುಭವ ಹಂಚಿಕೊಂಡರು. ಶಾಲೆ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಿ, ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರು ಬರಮಾಡಿಕೊಂಡರು.
ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶೃಂಗಾರಗೊಂಡ ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮೂಲಕ ಮಕ್ಕಳು ಶಾಲೆಗೆ ಬಂದರು. ಕೈಯಲ್ಲಿ ಶಿಕ್ಷಣದ ಮಹತ್ವ ಸಾರುವ ಫಲಕಗಳನ್ನು ಮಕ್ಕಳು ಪ್ರದರ್ಶಿಸಿದರು. ಅಲ್ಲದೇ ಶಾಲಾ ಪ್ರಾರಂಭೋತ್ಸವಕ್ಕಾಗಿ ಗ್ರಾಮಸ್ಥರು ಜಾನಪದ ಹಾಡು ರಚಿಸಿದ್ದು ಮತ್ತೊಂದು ವಿಶೇಷವಾಗಿತ್ತು. ಡ್ರಮ್ ಬಾರಿಸುತ್ತಾ ಸಹಪಾಠಿಗಳೊಂದಿಗೆ ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.ಮೊದಲ ದಿನ ಮಕ್ಕಳ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಮಧ್ಯಾಹ್ನದ ಬಿಸಿಯೂಟಕ್ಕೆ ಜಿಲ್ಲೆಯ ಬಹುತೇಕ ಎಲ್ಲ ಶಾಲೆಗಳಲ್ಲಿ ಮಾವಿನಹಣ್ಣಿನ ಸಿಕರಣಿ, ಹೋಳಿಗೆ, ಸೀರಾ, ಪಾಯಸ, ಹುಗ್ಗಿ, ಅನ್ನ, ಸಾಂಬಾರ ಸೇರಿ ಮತ್ತಿತರ ತಿನಿಸುಗಳ ಊಟ ಸವಿದರು. ಇನ್ನು ಬೆಳಗಾವಿ ನಗರದ ಸರ್ದಾರ್ಸ್ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿದ ಶಿಕ್ಷಕರು ಅದ್ಧೂರಿಯಾಗಿ ಬರಮಾಡಿಕೊಂಡರು. ತಳಿರು ತೋರಣಗಳಿಂದ ಶಾಲೆಯನ್ನು ಶೃಂಗರಿಸಲಾಗಿತ್ತು. ಅಲ್ಲದೇ ಶಾಲೆ ಆವರಣದಲ್ಲಿ ರಂಗೋಲಿಯನ್ನು ಬಿಡಿಸಲಾಗಿತ್ತು. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮಕ್ಕಳಿಗೆ ಸಿಹಿ ವಿತರಿಸಿ ಶಿಕ್ಷಕರು ತರಗತಿ ಆರಂಭಿಸಿದರು. ಮೊದಲ ದಿನವಾದ ಕಾರಣ ಪಾಠ ಪ್ರವಚನಕ್ಕೆ ಶಿಕ್ಷಕರು ಆದ್ಯತೆ ನೀಡಲಿಲ್ಲ. ಬದಲಿಗೆ ವಿದ್ಯಾರ್ಥಿಗಳ ಯೋಗಕ್ಷೇಮ, ರಜೆ ದಿನಗಳನ್ನು ಹೇಗೆ ಕಳೆದರು, ಯಾವ ಯಾವ ಊರಿಗೆ ಹೋಗಿದ್ದರು, ರಜೆ ದಿನದಲ್ಲಿ ವಿಶೇಷ ಏನಿತ್ತು ಎಂಬುವುದನ್ನು ಮಕ್ಕಳಿಂದ ಕೇಳಿ ತಿಳಿದುಕೊಂಡರು.