ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೇ 12 ರಿಂದ 21ರವರೆಗೆ ಮೂರ್ನಾಡಿನಲ್ಲಿ ಮಕ್ಕಳ ಉಚಿತ "ಚಿಂತನೆ - ಚಲನೆ " ಶಿಬಿರ ನಡೆಯಲಿದೆ.ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ಪಂಚಾಯಿತಿ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ 10 ದಿನಗಳ ಕಾಲ ನಡೆಯುವ ಶಿಬಿರದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು.ಪ್ರತಿದಿನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಕನ್ನಡದ ಮಹತ್ವವನ್ನು ಹೇಳಿಕೊಡಲಾಗುವುದು. ಕನ್ನಡ ಅಕ್ಷರ ಬರೆಯುವ, ಓದುವ, ಪದಗಳ ಜೋಡಣೆ ಮಾಡುವ ತಿಳುವಳಿಕೆ, ಹಳೆಗನ್ನಡ, ಸಂಸ್ಕೃತಿ, ಸಂಸ್ಕೃತ, ಆಟದ ಜೊತೆಗೆ ಕಲಿಕೆ, ಕವನ ವಾಚನ, ಕಲಿಕೆ, ಸಣ್ಣ ಕಥೆ, ಮಕ್ಕಳ ಕಥೆ, ಕಾದಂಬರಿ ಬರೆಯುವ ಕುರಿತು ತಿಳಿಸಿಕೊಡಲು ಸಭೆಯಲ್ಲಿ ನಿರ್ಧರಿಸಲಾಯಿತು.ಜಾನಪದ ಮಹತ್ವ, ಜಾನಪದ ಹಾಡು, ನೃತ್ಯ ಕಲಿಕೆ, ಜಾನಪದ ಕ್ರೀಡೆ, ಸಿನಿಮಾ ಪ್ರಪಂಚಕ್ಕೆ ಸಂಬಂಧಿಸಿದಂತೆ ನಾಟಕ, ನಟನೆ, ಕಲಿಕೆ, ಏಕಪಾತ್ರಾಭಿನಯ, ಸಿನಿಮಾ ತಯಾರಿಕೆ, ಕೊಡಗಿನ ಸಾಮಾನ್ಯ ಜ್ಞಾನ ಹಾಗೂ ಮಕ್ಕಳ ಮುಂದಿನ ಭವಿಷ್ಯ, ವೃತ್ತಿಪರತೆ, ಪತ್ರಿಕೋದ್ಯಮ, ರಾಜಕೀಯ, ಪೊಲೀಸ್, ವೈದ್ಯಕೀಯ ಕಾನೂನು, ಶಿಕ್ಷಣ ಈ ಎಲ್ಲಾ ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಅರಿವು ಮೂಡಿಸಲು ನಿರ್ಧಾರ ಕೈಗೊಳ್ಳಲಾಯಿತು. ಕೊನೆಯ ದಿನ ಕಲಿಕೆಯ ಎಲ್ಲಾ ವಿಷಯಗಳ ಕುರಿತು ಸ್ಪರ್ಧೆ ನಡೆಸುವುದು, ವಿಜೇತರಾದ ಮಕ್ಕಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡುವುದು, ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಗುವುದು. 10 ದಿನಗಳು ನಡೆಯುವ ಶಿಬಿರದ ಮಾಹಿತಿಯನ್ನು ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡುವ ಕುರಿತು ನಿರ್ಧರಿಸಲಾಯಿತು ಎಂದು ಈರಮಂಡ ಹರಿಣಿ ವಿಜಯ್ ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾಸ್ಪತ್ರೆ ತುರ್ತು ಘಟಕದ ಮುಖ್ಯಸ್ಥ ಡಾ.ಮೋಹನ್ ಅಪ್ಪಾಜಿ, ದಂತವೈದ್ಯೆ ಡಾ.ಅನುಶ್ರೀ, ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಿಲ್ಲಾ ಕ.ಸಾ.ಪ.ದ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಶಕ್ತಿ ಪತ್ರಿಕೆ ಉಪಸಂಪಾದಕ ಕುಡೆಕಲ್ ಸಂತೋಷ್, ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹ್ಮದ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಮಡಿಕೇರಿ ಉಪ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ಅವರುಗಳು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತರು ಮೊ.ಸಂ. 9945976332, 9449562149, 9008751032 ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.ಸಭೆಯಲ್ಲಿ ಕೋಶಾಧಿಕಾರಿ ಮಡೆಯಂಡ ಸೂರಜ್, ಸಂಘಟನಾ ಕಾರ್ಯದರ್ಶಿ ಮಮತಾ ಕೊಂಪುಳಿರ, ಅಪ್ಪಚಂಡ ಸುಚಿತ ಕಾವೇರಪ್ಪ, ಪ್ರತಿನಿಧಿ ಕೆ.ಎ.ಖಾದರ್, ವಿಶೇಷ ಅಹ್ವಾನಿತರಾದ ಕಿಗ್ಗಾಲು ಎಸ್.ಗಿರೀಶ್, ಪುದಿಯೊಕ್ಕಡ ರಮೇಶ್, ಬಿ.ಎಂ.ಧನಂಜಯ, ಸದಸ್ಯರಾದ ಬಿ.ಎನ್.ಗಿರೀಶ್, ಡೈಸಿ, ಜಮುನಾ ಉಪಸ್ಥಿತರಿದ್ದರು. ಕಸಾಪ ಮೂರ್ನಾಡು ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮೀ ಸ್ವಾಗತಿಸಿ, ವಂದಿಸಿದರು.