ಧಾರವಾಡ:
ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಬೆಳಕಿಗೆ ತರುತ್ತವೆ. ಪ್ರತಿಯೊಂದು ಮಗುವಿನಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದು ಗೊತ್ತಾಗಬೇಕಾದರೆ ಮಕ್ಕಳು ಹೆಚ್ಚು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಾಹಿತಿ ಡಾ. ಜಿನದತ್ತ ಹಡಗಲಿ ನುಡಿದರು.ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯದೊಂದಿಗೆ ನಡೆಸಿದ `ಚಿಲಿಪಿಲಿ ಮಕ್ಕಳ ನಾಟಕೋತ್ಸವ’ ಉದ್ಘಾಟಿಸಿ ಮಾತನಾಡಿದರು.
ಯಾವ ಮಗು ಪಠ್ಯೇತರ ಚಟುವಟಿಕೆಗಳಲ್ಲಿ ಅದೂ ವಿಶೇಷವಾಗಿ ನಾಟಕದಲ್ಲಿ ಭಾಗವಹಿಸುವುದೋ ಆ ಮಗು ಹೆಚ್ಚು ಕಲಿಕೆಯಲ್ಲಿ ಮುಂದೆ ಇರುತ್ತದೆ ಎಂಬುದು ವೈಜ್ಞಾನಿಕವಾಗಿ ಸಿದ್ಧಮಾಡಿದೆ ಎಂದ ಅವರು, ನಾಟಕ ಎನ್ನುವುದು ನವರಸ ಮತ್ತು ಎಲ್ಲ ಲಲಿತ ಕಲೆ ಒಳಗೊಂಡ ಕಲೆ. ಅದಕ್ಕಾಗಿ ಪಾಲಕರು ತಮ್ಮ ಮಗು ಲಲಿತಕಲೆಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.ಪರಿಸರ ಹೋರಾಟಗಾರ್ತಿ ಸರಸ್ವತಿ ಪೂಜಾರ ಮಾತನಾಡಿ, ಮಕ್ಕಳು ನಾಟಕ ಆಡುವುದರಿಂದ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರತಿ ಮಗುವೂ ಒಳ್ಳೆಯ ನಟನಾಗಿರುತ್ತದೆ ಎಂದರು.
ಜನಪದ ಹಿರಿಯ ಕಲಾವಿದೆ ಪ್ರಮಿಳಾ ಜಕ್ಕನ್ನವರ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ಪಾಲಕರು ಪ್ರೋತ್ಸಾಹಿಸಬೇಕು. ಅಂದಾಗ ತಮ್ಮ ಮಕ್ಕಳಲ್ಲಿ ಎಂಥ ಪ್ರತಿಭೆ ಅಡಗಿದೆ ಎಂಬುದು ತಿಳಿಯಲಿದೆ ಎಂದರು.ಚಿಲಿಪಿಲಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ಬಾಲಬಳಗದ ಮಕ್ಕಳು ಕೊಟಗಾನಹಳ್ಳಿ ರಾಮಯ್ಯ ಅವರ ನಾಟಕ `ಒಗಟಿನ ರಾಣಿ’ ಪ್ರದರ್ಶಿಸಿದರು. ಕುಮಾರ ಲಾಲ್ ನಿರ್ದೇಶನ ಮಾಡಿದರು. ಧಾರವಾಡದ ದುರ್ಗಾ ಕಾಲನಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು `ಮಳೆ ಮಾಯೆ’ ನಾಟಕ ಪ್ರದರ್ಶನ ಮಾಡಿದರು. ಶ್ರುತಿ ಹುರಳಿಕೊಪ್ಪಿ ನಿರ್ದೇಶನ ಮಾಡಿದರು. ರಂಗ ಸಾಮ್ರಾಟ ಅಭಿನಯ ಶಾಲೆಯ ಮಕ್ಕಳಿಂದ `ವಚನ ರೂಪಕ’ ಪ್ರದರ್ಶಿಸಿದರು. ಸಿಕಂದರ ದಂಡಿನ ನಿರ್ದೇಶನ ಮಾಡಿದರು. `ಕಾಡಿನ ಹಾಡು’ ನೃತ್ಯವನ್ನು ಗುಬ್ಬಚ್ಚಿ ಗೂಡು ಶಾಲೆಯ ಮಕ್ಕಳು ಮಾಡಿದರು. ಪ್ರಗತಿ ಸಾಬಳೆ ನೃತ್ಯ ನಿರ್ದೇಶನ ಮಾಡಿದರು.