ಬ್ಯಾಡಗಿ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಮೆಣಸಿನಕಾಯಿ ವಹಿವಾಟಿನ ಮೇಲೆ ಯಾವುದೇ ಪ್ರತಿ ಕೂಲ ಪರಿಣಾಮ ಬೀರಿದಂತೆ ಕಂಡುಬಂದಿಲ್ಲ. ಹೀಗಾಗಿ ಸ್ಥಳೀಯ ಮಾರುಕಟ್ಟೆಗೆ ಗುರುವಾರ 1.75 ಲಕ್ಷ ಚೀಲ ಮಾರಾಟಕ್ಕೆ ಲಭ್ಯವಿದ್ದು, ಆವಕದಲ್ಲಿ 20 ಸಾವಿರ ಚೀಲ ಏರಿಕೆಯಾಗಿದೆ. ದರದಲ್ಲಿಯೂ ಸಹ ಎಂದಿನಂತೆ ಸ್ಥಿರತೆ ಕಾಯ್ದುಕೊಂಡಿದೆ.ಇರಾನ್-ಇಸ್ರೇಲ್ ನಡುವಿನ ಯುದ್ಧದಿಂದ ಯುಎಇ ಸೇರಿದಂತೆ ಇರಾನ್ ಮತ್ತು ಇಸ್ರೇಲ್ ದೇಶಗಳಿಗೆ ರಫ್ತಾಗುತ್ತಿದ್ದ ಮೆಣಸಿನಕಾಯಿ ಹೊತ್ತೊಯ್ಯಲು ಕಂಟೇನರಗಳು ಸಿಗದೇ ಭಾರತದಲ್ಲೇ ಉಳಿದಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಗುರುವಾರ ಮಾರುಕಟ್ಟೆಯಲ್ಲಿ ಖರೀದಿದಾರರ ಹುಮ್ಮಸ್ಸು ಕಡಿಮೆಯಾಗಿರಲಿಲ್ಲ, ಆವಕ ಅಥವಾ ದರದಲ್ಲಾಗಲಿ ಯಾವುದೇ ವ್ಯತ್ಯಾಸ ಕಾಣದೇ ವದಂತಿಗಳಿಗೆ ತೆರೆ ಬಿದ್ದಿದೆ.ಕಳೆದ ಕೆಲ ವಾರಗಳಿಂದ ಆವಕದಲ್ಲಿ ಇಳಿಮುಖವಾಗಿದ್ದು, ಏರಿಕೆ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಗುರುವಾರ ಮತ್ತೆ ಆವಕದಲ್ಲಿ 20 ಸಾವಿರ ಚೀಲ ಏರಿಕೆ ಕಂಡಿದ್ದು, ಬರುವ ದಿನಗಳಲ್ಲಿ 2 ಲಕ್ಷ ದಾಟುವ ನಿರೀಕ್ಷೆ ವ್ಯಾಪಾರಸ್ಥರಲ್ಲಿದೆ. ಗುರುವಾರ ಒಟ್ಟು 417 ಖರೀದಿದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.