ಸೋಮರಡ್ಡಿ ಅಳವಂಡಿ ಕೊಪ್ಪಳ
ವ್ಯಥೆ -2 ಮಗ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ. ತಂದೆಯ ಆನಾರೋಗ್ಯ ನೋಡಲು ಆಗುತ್ತಿಲ್ಲ. ಇದಕ್ಕೆ ಮಾಡಿದ ₹17 ಲಕ್ಷ ಸಾಲ ತೀರಿಸಲು ಆಗುತ್ತಿಲ್ಲ.
ವ್ಯಥೆ -3 ಧೂಳಿನಿಂದ ನಮ್ಮ ಬದುಕು ಕರಿಬೂದಿಯಾಗಿದೆ. ಉಂಡರೂ ಕರಿಬೂದಿ, ಉಸಿರಾಡಿದರೂ ಕರಿಬೂದಿ. ತಾಯಿಯ ಎದೆಹಾಲು ವಿಷವಾಗಿದೆ.ಇದು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನರೇಂದ್ರ ಸ್ವಾಮಿ ಎದುರು ಕಾರ್ಖಾನೆಯ ತ್ಯಾಜ್ಯದ ಕಣ್ಣೀರ ಕತೆ ಹೇಳಿ, ಕಾರ್ಖಾನೆಗಳನ್ನಾದರೂ ಬಂದ್ ಮಾಡಿ, ಇಲ್ಲ ನಮಗೆ ವಿಷವನ್ನಾದರು ಕೊಡಿ ಎಂದು ಸಂತ್ರಸ್ತರು ಗೋಳಿಟ್ಟ ಪರಿ.
ಕಾರ್ಖಾನೆ ತ್ಯಾಜ್ಯದಿಂದ ನೂರೆಂಟು ಸಮಸ್ಯೆಯಾಗಿದ್ದರಿಂದ ಕಾರ್ಖಾನೆ ತೊಲಗಿಸಿ, ನಮಗೆ ಬದುಕಲು ಬಿಡಿ ಎಂದು ಆಗ್ರಹಿಸಿ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಮತ್ತು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ಸಮಿತಿಯಿಂದ ಕಳೆದ 134 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಹಾಗೂ ಇತ್ತೀಚಿಗೆ ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪರಿಸ್ಥಿತಿ ಕೈ ಮೀರುವಂತಾಗಿರುವುದು ಹಾಗೂ ಗ್ರಾಮಸ್ಥರು ರೊಚ್ಚಿಗೆದ್ದಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಆಗಮಿಸಿ ಹಿರೇಬಗನಾಳ ಗ್ರಾಮ ಮತ್ತು ಇತರ ಪ್ರದೇಶದಲ್ಲಿ ಸುತ್ತಾಡಿಸಲಾಯಿತು. ಮೂಗುಮುಚ್ಚಿಕೊಂಡೇ ಓಡಾಡಿದ್ದು ಅಲ್ಲದೆ ಇಂಥ ಹೀನಾಯ ಸ್ಥಿತಿಯಲ್ಲಿ ಜನರು ಹೇಗೆ ತಾನೇ ಜೀವನ ಮಾಡಲು ಸಾಧ್ಯ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.
ಹಿರೇಬಗನಾಳ ಗ್ರಾಮದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡುವ ವೇಳೆಯಲ್ಲಿ ಗ್ರಾಮಸ್ಥರು ಹೇಳಿದ ಒಂದೊಂದು ಕಣ್ಣೀರ ಕತೆಗಳು ಕಾರ್ಖಾನೆಯ ತ್ಯಾಜ್ಯದ ನರಕ ದರ್ಶನ ತೆರೆದಿಟ್ಟವು.
ಗವಿಸಿದ್ದಪ್ಪ ಪುಟ್ಟಗಿ ಹೇಳುವುದೇ ಬೇರೆ, ನಮ್ಮ ತಂದೆ, ತಾಯಿಗಳನ್ನು ಇಲ್ಲಿ ಉಳಿಸಿಕೊಳ್ಳಲು ಆಗುತ್ತಿಲ್ಲ, ನಮ್ಮ ಮಕ್ಕಳು ಇಲ್ಲಿದ್ದರೆ ಆಸ್ಪತ್ರೆಯಲ್ಲಿಯೇ ಹೆಚ್ಚು ದಿನ ಇರಬೇಕಾಗುತ್ತದೆ ಎಂದು ದೂರದ ಸಂಬಂಧಿಕರ ಮನೆಯಲ್ಲಿಟ್ಟಿದ್ದೇವೆ. ಕಾರ್ಖಾನೆಯ ಕರಿಬೂದಿ ತಂದೆ ಮಕ್ಕಳನ್ನು ದೂರು ಮಾಡಿದೆ ಎಂದರು.
ನಾವು ಊಟ ಮಾಡುವುದು ಕರಿಬೂದಿ, ಮೈತೊಳೆದುಕೊಳ್ಳುವ ನೀರು ಕರಿ ನೀರು, ಕುಡಿಯುವ ನೀರು ಕರಿ ನೀರು. ಹೀಗಾಗಿ, ನಮ್ಮ ಎದೆಯ ಹಾಲು ವಿಷವಾಗಿದೆ. ಕಾರ್ಖಾನೆ ಬಂದ್ ಮಾಡಿಸಿ, ಇಲ್ಲ ನಮಗೆ ವಿಷ ಕೊಟ್ಟು ಪುಣ್ಯಕಟ್ಟಿಕೊಳ್ಳಿ ಎನ್ನುತ್ತಾರೆ ರೇಣುಕಮ್ಮ ಫಲ್ಲೇದ ಅವರು.
ಇದೆಲ್ಲವನ್ನು ಆಲಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರು, ನನಗೆ ಅಚ್ಚರಿಯಾಗುತ್ತದೆ. ಇಷ್ಟೊಂದು ಸ್ಪಾಂಜ್ ಐರನ್ ಕಾರ್ಖಾನೆ ಒಂದೇ ಜಾಗದಲ್ಲಿ ಹಾಕಿದ್ದೇ ತಪ್ಪು. ನನಗೆ ಸಮಸ್ಯೆ ಅರಿವಾಗಿದೆ. ಖಂಡಿತವಾಗಿಯೂ ನಾನು ಇದರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇನೆ ಎಂದರು.
ಕಾರ್ಖಾನೆ ವಾಯುಮಾಲಿನ್ಯ, ಜಲಮಾಲಿನ್ಯದಿಂದ ಹಿರೇಬಗನಾಳ ಗ್ರಾಮವೊಂದರಲ್ಲಿಯೇ 122 ಜನರಿಗೆ ಉಸಿರಾಟದ ಸಮಸ್ಯೆ. 49 ಜನರಿಗೆ ಚರ್ಮ ಕಾಯಿಲೆ, 29 ಜನರಿಗೆ ಟಿಬಿ, ಕೆಲವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.