ಕುರುಗೋಡು: ತಾಲೂಕಿನ ಮೆಣಸಿನಕಾಯಿ ಬೆಳೆಗಾರರ ಹಿತದೃಷ್ಟಿಯಿಂದ ದೃಢೀಕರಿಸಿದ ಬೀಜ ಬಳಸಿ ಮೆಣಸಿನಕಾಯಿ ಸಸಿ ಬೆಳೆಯಬೇಕು ಎಂದು ತಹಶೀಲ್ದಾರ್ ನರಸಪ್ಪ ನರ್ಸರಿ ಮಾಲೀಕರಿಗೆ ಸೂಚಿಸಿದರು.
ನರ್ಸರಿ ಮಾಲೀಕರು ನಡೆಸುವ ಚಟುವಟಿಕೆಗಳು ನಿಯಮ ಬದ್ಧವಾಗಿರಬೇಕು. ನರ್ಸರಿ ಜಾಗ ಗುತ್ತಿಗೆ ಪಡೆದಿದ್ದಲ್ಲಿ ನಿಯಮಾನುಸಾರ ಒಡಂಬಡಿಕೆ ಮಾಡಿಸಿಕೊಳ್ಳಬೇಕು. ನರ್ಸರಿ ಮುಂಭಾಗ ಹೆಸರಿನ ನಾಮಫಲಕದಲ್ಲಿ ಜಿಎಸ್‌ಟಿ ಸಂಖ್ಯೆ ಬರೆಸಿ ಅಳವಡಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ನರ್ಸರಿಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಸಸಿ ಬೆಳೆಸಬೇಕು. ಬಳಸುವ ಬೀಜ ಮತ್ತು ಕ್ರಿಮಿನಾಶಕ ಕಂಪನಿಯ ಹೆಸರು, ರೈತರ ಹೇಳಿಕೆ ದಾಖಲಿಸುವ ಪುಸ್ತಕಗಳನ್ನು ನಿರ್ವಹಿಸಬೇಕು.ಮಾರುಕಟ್ಟೆಯಲ್ಲಿ ಕೃತಕ ಮುಗ್ಗಟ್ಟು ಸೃಷ್ಟಿಸದೆ ಪ್ರತಿ ಸಸಿಗೆ ೫೦ ಪೈಸೆಯಂತೆ ದರ ನಿಗದಿಗೊಳಿಸಬೇಕು. ನಿಗಧಿತ ಬೆಲೆಗಿಂತ ಅಧಿಕ ಹಣ ಪಡೆದರೆ ಹಾಗೂ ನಿಯಮಗಳ ಪಾಲನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಸಿದರು.
ಮೆಣಸಿನಕಾಯಿ ಬೆಳೆಗಾರರು ಕಡ್ಡಾಯವಾಗಿ ಜಿ.ಎಸ್.ಟಿ ನೋಂದಾಯಿತ ನರ್ಸರಿಗಳಲ್ಲಿ ಮಾತ್ರ ಸಸಿಗಳನ್ನು ಖರೀದಿಸಬೇಕು. ಪಹಣಿಯಲ್ಲಿರುವ ರೈತ ಹೆಸರಿಗೆ ಹಣಪಾವತಿ ರಸೀದಿ ಪಡೆದು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದರು. ನರ್ಸರಿ ಮಾಲೀಕರು ತಾವು ಬಳಸಿದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ವಿವರಗಳನ್ನು ಕಡ್ಡಾಯವಾಗಿ ವಹಿಯಲ್ಲಿ ನಮೂದಿಸಬೇಕು. ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕ ಕುರಿತು ಮಾಹಿತಿ ವಹಿ ನಿರ್ವಹಿಸಬೇಕು. ನರ್ಸರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಇಲ್ಲವಾದರೆ ಕಪ್ಪುಪಟ್ಟಿಗೆ ಸೇರಿಸಲಾಗುವುದು. ಕೆಲಸಕ್ಕೆ ಬಾಲಕಾರ್ಮಿಕರನ್ನು ನೇಮಿಸಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಗರಿ ಕೃಷಿ ವಿಜ್ಞಾನ ಕೇಂದ್ರದ ರೋಗಶಾಸ್ತ್ರ ತಜ್ಞ ಆನಂದ, ಕೀಟಶಾಸ್ತ್ರ ತಜ್ಞ ಗೋವಿಂದ ಅವರಿಂದ ನರ್ಸರಿ ಮಾಲೀಕರಿಗೆ ನರ್ಸರಿ ನಿರ್ವಹಣೆ ಕುರಿತು ಮಾಹಿತಿ ಮಾರ್ಗದರ್ಶನ ನೀಡಲಾಯಿತು.
ಸಹಾಯಕ ತೋಟಗಾರಿಕೆ ನಿರ್ದೇಶಕ ಪಿ.ಟಿ.ವಸಂತ್, ಸಹಾಯಕ ತೋಟಗಾರಿಕೆ ಅಧಿಕಾರಿ ರಾಘವೇಂದ್ರ ಮತ್ತು ಕಿರಣ್ ಎಚ್.ಚೌರದ್, ಪ್ರಾಂತ ರೈತ ಸಂಘದ ಅಧ್ಯಕ್ಷ ಗಾಳಿ ಬಸವರಾಜ ಇದ್ದರು.