ತೀರ್ಥಹಳ್ಳಿ: ಈ ಬಾರಿಯ ಭಾರತ-ಪಾಕ್ ನಡುವಿನ ಯುದ್ಧ ವಿಶೇಷವಾಗಿದ್ದು, ಅಣುಬಾಂಬ್ ಹೊಂದಿರುವ ಎರಡು ದೇಶಗಳ ನಡುವೆ ಜಗತ್ತಿಗೇ ಎಚ್ಚರಿಕೆ ನೀಡುವಂತೆ ನಡೆದ ಮೊದಲ ಯುದ್ಧವಾಗಿದೆ. ಒಂದೊಮ್ಮೆ ಚೀನಾ ಎದುರಾದರೂ ಸಮರ್ಥವಾಗಿ ಎದುರಿಸುವ ತಾಕತ್ತು ನರೇಂದ್ರ ಮೋದಿ ನೇತೃತ್ವದ ಭಾರತಕ್ಕಿದೆ ಎಂದು ರಾಷ್ಟ್ರೀಯವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಆಪರೇಷನ್ ಸಿಂದೂರ ಯಶಸ್ಸಿಗಾಗಿ ದೇಶದ ಯೋಧರಿಗೆ ನೈತಿಕ ಬಲ ತುಂಬುವ ಸಲುವಾಗಿ ನಾಗರಿಕ ವೇದಿಕೆಯಿಂದ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ವಿಜಯ ಸಿಂದೂರ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಪಟ್ಟಣದ ಮುಖ್ಯ ಬೀದಿಗಳಲ್ಲಿ ನಡೆದ ಶೋಭಾಯಾತ್ರೆಯ ನಂತರ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಪಹಲ್ಗಾಂ ಘಟನೆಗೆ ಸಂಬಂಧಿಸಿ ಭಯಾನಕವಾದ ಮಾಹಿತಿ ಶೀಘ್ರದಲ್ಲಿ ಹೊರ ಬರುವ ಸಾಧ್ಯತೆಯಿದೆ ಎಂದರು.ಭಯೋತ್ಪಾದನೆಯನ್ನು ಹೊಸಕಿ ಹಾಕುವ ನಿಟ್ಟಿನಲ್ಲಿ ಪಾಕಿಸ್ತಾನದ ವಿರುದ್ಧ ಸಾರಿರುವ ಯುದ್ಧ ಮುಂದುವರೆಯಲಿದ್ದು, ಪ್ರತಿಯೊಬ್ಬ ಪ್ರಜೆಯೂ ದೇಶದ ಪರ ನಿಲ್ಲುವ ಮೂಲಕ ಹೊಸ ಭಾಷ್ಯವನ್ನು ಬರೆಯಬೇಕಿದೆ. ಭಾರತ ಬದಲಾಗಿದ್ದು ಪಾಕಿಸ್ತಾನದ ಅಣುಬಾಂಬ್ ಸೇರಿದಂತೆ ಯಾವುದೇ ಗೊಡ್ಡು ಬೆದರಿಕೆಗೂ ಬಗ್ಗುವುದಿಲ್ಲ ಎಂಬುದನ್ನು ಈ ಯುದ್ಧ ನಿರೂಪಿಸಿದೆ. ಆಪರೇಷನ್ ಸಿಂದೂರದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಮಾರ್ಗದರ್ಶನದಲ್ಲಿ ನಮ್ಮ ಯೋಧರು ಪಾಕಿಸ್ತಾನ ಬಹುದಿನಗಳವರೆಗೆ ನೆನಪಿಡುವಂತಹ ಹೆಮ್ಮೆಯ ಕಾರ್ಯ ಮಾಡಿದ್ದಾರೆ ಎಂದರು.ಈ ಯುದ್ಧದಲ್ಲಿ ನಾವು ಏನನ್ನು ಕಳೆದುಕೊಂಡಿಲ್ಲಾ ಎಂದು ಸೇನಾ ಮುಖ್ಯಸ್ಥರು ಹೇಳಿದ್ದರೂ ರಾಹುಲ್ ಗಾಂಧಿ ಈ ಯುದ್ಧದಲ್ಲಿ ಭಾರತ ಕಳೆದುಕೊಂಡಿರುವ ಬಗ್ಗೆ ಲೆಕ್ಕ ಕೊಡಿ ಎಂದು ಕೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪಹಲ್ಗಾಂ ಘಟನೆಗೆ ಸರ್ಕಾರವೇ ಕಾರಣ ಎಂದಿದ್ದಾರೆ. ಓವೈಸಿ ಕೂಡಾ ದೇಶಭಕ್ತಿ ತೋರಿರುವ ಸಂಧರ್ಭದಲ್ಲಿ ಈ ಇಬ್ಬರು ನಾಯಕರ ಹೇಳಿಕೆ ಖಂಡನೀಯ ಎಂದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಆಗುಂಬೆ ವೃತ್ತದಿಂದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.