ಕನ್ನಡಪ್ರಭ ವಾರ್ತೆ ಅಫಜಲ್ಪುರ
ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಶಾಸಕ ಎಂ.ವೈ.ಪಾಟೀಲ ಅವರ ಗಮನಕ್ಕೆ ಬಂದ ತಕ್ಷಣವೇ ಕೆಬಿಜಿಎನ್ಎಲ್ ಅಧಿಕಾರಿಗಳಿಗೆ ಶಾಸಕ ಎಂ ವೈ ಪಾಟೀಲ ಅವರು ನೀವೇನು ಮಾಡ್ತಿರಿ ಗೊತ್ತಿಲ್ಲ, ಕೂಡಲೇ ಇಂದೇ ತಾತ್ಕಾಲಿಕ ಮುರಮ ಹಾಕಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ರಸ್ತೆ ಸಂಪರ್ಕ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಖಡಕ್ ಸಂದೇಶ ನೀಡಿದರು. ಶಾಸಕರ ಆದೇಶಕ್ಕೆ ತಕ್ಷಣವೇ ಎಚ್ಚೆತ್ತುಕೊಂಡ ಕೆಬಿಜಿಎನ್‍ಎಲ್ ಅಧಿಕಾರಿಗಳಾದ ಯು.ಪಿ.ಸೋನಾವಣೆ, ಲಕ್ಷ್ಮಿಕಾಂತ ಬಿರಾದಾರ ಹಾಗೂ ಪಿಎಸ್ಐ ಸಂಗೀತಾ ಶಿಂಧೆ ಸ್ಥಳಕ್ಕೆ ದೌಡಾಯಿಸಿ ಜಮೀನು ಕಳೆದುಕೊಂಡ ರೈತರ ಮನವೊಲಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮೂಲಕ ಮುರಮ್ ರಸ್ತೆ ಕೆಲಸ ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಗ್ರಾಮಸ್ಥರು ಇದ್ದರು.
--------ಕೆಬಿಜಿಎನ್‍ಎಲ್ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ಇಳಿದ ತಕ್ಷಣವೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಹೇಳಿರುವೆ. ಒಂದು ವಾರದೊಳಗೆ ಸುಮಾರು 20 ಲಕ್ಷ ರುಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತದೆ. ಅಲ್ಲಿಯವರೆಗೂ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಓಡಾಡಲು ತಾತ್ಕಾಲಿಕ ಮುರಮ ರಸ್ತೆ ಮಾಡಲು ಸೂಚನೆ ನೀಡಿದ್ದೇನೆ. ಶಾಲಾ ಮಕ್ಕಳು ನಡೆದುಕೊಂಡು ಸೇತುವೆ ದಾಟುವ ಫೋಟೋ ಜೊತೆಗೆ ಮುಂದೆ ಆಗುವ ಅನಾಹುತದ ಬಗ್ಗೆ "ಕನ್ನಡಪ್ರಭ " ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಿ ನಮ್ಮ ಗಮನಕ್ಕೆ ತಂದಿರುವುದು ಶ್ಲಾಘನೀಯ.
ಎಂ.ವೈ.ಪಾಟೀಲ ಶಾಸಕ, ಅಫಜಲ್ಪುರ