ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಂಗಳವಾರ ಪೊಲೀಸರು ಹಾಜರುಪಡಿಸಿದರು. ಬಳಿಕ ಚಿನ್ನಯ್ಯನ ಹೇಳಿಕೆಯನ್ನು ದಾಖಲಿಸಲಾಯಿತು. ಈ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸೆ.25 ರಂದು ಮತ್ತೆ ಕೋರ್ಟ್‌ಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ನ್ಯಾಯಾಧೀಶರು ಸೂಚಿಸಿದರು.
ಚಿನ್ನಯ್ಯನ ಹೇಳಿಕೆ ದಾಖಲು ಪ್ರಕ್ರಿಯೆ ಸಂಜೆವರೆಗೆ ನಡೆಯಿತು. ಆತ ಮತ್ತಷ್ಟು ಹೇಳಿಕೆ ನೀಡಲು ಇದೆ ಎಂದು ಹೇಳಿದ ಕಾರಣ ನ್ಯಾಯಾಧೀಶರು ಸೆ. 25ರಂದು ಮತ್ತೆ ಕೋರ್ಟ್‌ಗೆ ಹಾಜರುಪಡಿಸಿ ಹೇಳಿಕೆ ದಾಖಲಿಗೆ ಅವಕಾಶ ನೀಡುವುದಾಗಿ ಹೇಳಿದರು. ಹೀಗಾಗಿ ಚಿನ್ನಯ್ಯನನ್ನು ಮತ್ತೆ ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾಗಿದೆ.
ಕಣ್ಣೀರಿಟ್ಟ ಚಿನ್ನಯ್ಯ:ಈ ಮಧ್ಯೆ, ಚಿನ್ನಯ್ಯ ಬೆಳ್ತಂಗಡಿ ಕೋರ್ಟ್‌ನಲ್ಲಿ ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಪ್ರಕರಣದಲ್ಲಿ ನನ್ನದು ತಪ್ಪಿಲ್ಲ, ನನ್ನನ್ನು ಸಿಲುಕಿಸಲಾಗಿದೆ. ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾನೆ.
ಹಣ ವರ್ಗಾವಣೆ ಕುರಿತು ತನಿಖೆ
ಆರೋಪಿ ಚಿನ್ನಯ್ಯ, ಆತನ ಪತ್ನಿ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದ ವಿವರ ಸಂಗ್ರಹಿಸಿದೆ. ಹಣಕಾಸು ನೆರವು ನೀಡಿರುವ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಎನ್ನಲಾದ 11 ಮಂದಿಗೆ ತನಿಖೆಗೆ ಹಾಜರಾಗುವಂತೆ ಈಗಾಗಲೇ ಎಸ್‌ಐಟಿ ನೋಟಿಸ್ ನೀಡಿದ್ದು, ಆರು ಮಂದಿಯನ್ನು ವಿಚಾರಿಸಿದೆ. ಈ ನಡುವೆ ಗಿರೀಶ್ ಮಟ್ಟಣ್ಣವರ್ ಪತ್ನಿಯ ಖಾತೆಯಿಂದಲೂ ಚಿನ್ನಯ್ಯನ ಪತ್ನಿ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.ಆರು ತಿಂಗಳ ಹಿಂದೆ ಹಣ ವರ್ಗಾವಣೆ ಆಗಿರುವ ಬಗ್ಗೆ ದಾಖಲೆ ಪಡೆದಿರುವ ಅಧಿಕಾರಿಗಳು ಇನ್ನಷ್ಟು ಮಂದಿ ಹಣಕಾಸು ನೆರವು ನೀಡಿರುವ ಮಾಹಿತಿ ಸಂಗ್ರಹಿಸಿದ್ದಾರೆ. ಈಗಾಗಲೇ ಎಸ್‌ಐಟಿ ಆರು ಮಂದಿಯ ವಿಚಾರಣೆ ನಡೆಸಿದ್ದು, ಉಳಿದ ಮಂದಿಯ ವಿಚಾರಣೆ ನಡೆಸಬೇಕಾಗಿದೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಕೇಸು ದಾಖಲಾದ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ, ನಿರೀಕ್ಷಣಾ ಜಾಮೀನಿಗಾಗಿ ತಿಮರೋಡಿ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸ್ವೀಕರಿಸಿದೆ. ನಿರೀಕ್ಷಣಾ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳುವ ಸಾಧ್ಯತೆ ಇದ್ದು, ಪೊಲೀಸ್ ವರದಿ ಪಡೆದು ಸರ್ಕಾರಿ ಅಭಿಯೋಜಕರು ಬುಧವಾರ ಆಕ್ಷೇಪಣೆ ಸಲ್ಲಿಸಲಿದ್ದಾರೆ. ವಾದ-ಪ್ರತಿವಾದದ ಬಳಿಕ ನಿರೀಕ್ಷಣಾ ಜಾಮೀನು ನೀಡುವ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ.(ಬಾಕ್ಸ್):ಚಿನ್ನಯ್ಯನ ತಪ್ಪೊಪ್ಪಿಗೆತನಿಖೆಗೆ ಸಿಎಂಗೆ ಪತ್ರ