ಇಂದು ಚಿಂತಾಮಣಿ ನಗರ ಬಂದ್‌

KannadaprabhaNewsNetwork |  
Published : May 22, 2025, 01:11 AM IST
ದಲಿತ ಸಂಘಟನೆ | Kannada Prabha

ಸಾರಾಂಶ

ಡಾ.ಬಿ.ಆರ್. ಅಂಬೇಡ್ಕರ್‌ರ ಪುತ್ಥಳಿಯನ್ನು ಹಲವು ತಿಂಗಳಿಂದ ಬಟ್ಟೆಯನ್ನು ಸುತ್ತಿ ಅವಮಾನಿಸಿದ ತಾಲೂಕು ಆಡಳಿತ, ಜಿಲ್ಲಾಡಳಿತ ಮತ್ತು ಸಚಿವ ಡಾ.ಎಂ.ಸಿ.ಸುಧಾಕರ್‌ ಅವಮಾನಿಸಿದ್ದಾರೆ. ಕೂಡಲೇ ಸಿದ್ಧರಾಮಯ್ಯನವರು ಇತ್ತ ಗಮನ ಹರಿಸಿ ಪುತ್ಥಳಿ ವಿವಾದವನ್ನು ಬಗೆಹರಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ಉಗ್ರ ಹೋರಾಟ ಮಾಡುವುದಾಗಿ ದಲಿತ ಸಂಘಟನೆಗಳು ಎಚ್ಚರಿಸಿವೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಇಲ್ಲಿಯ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ತಿಂಗಳ ಹಿಂದೆ ಅನಧಿಕೃತವಾಗಿ ಸ್ಥಾಪಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ.ಸುಧಾಕರ್‌ರ ಸೇರಿಕೊಂಡು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆಂದು ಆರೋಪಿಸಿ ಮೇ ೨೨ ರಂದು ದಲಿತಪರ ಸಂಘಟನೆಗಳು ಚಿಂತಾಮಣಿ ಬಂದ್‌ಗೆ ಕರೆ ನೀಡಿವೆ.

ದಲಿತ ಪರ ಸಂಘಟನೆಗಳ ಒಕ್ಕೂಟದ ಮುಖಂಡ ವಿಜಯನರಸಿಂಹ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್‌ ರವರು ನೀಡಿರುವ ಸಂವಿಧಾನದಡಿಯಲ್ಲಿ ಅಧಿಕಾರಿಗಳು, ಸಚಿವರು ಅನುಕೂಲಗಳನ್ನು ಪಡೆದು ಈಗ ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋರಾತ್ರಿ ತೆರವು ಮಾಡಿಸುವ ಮೂಲಕ ಅಧಿಕಾರಿಗಳ ಹಾಗೂ ಸಚಿವರು ಅಂಬೇಡ್ಕರ್ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆಂದು ಧಿಕ್ಕಾರ ಕೂಗಿದರು.

ಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

ಡಾ.ಬಿ.ಆರ್. ಅಂಬೇಡ್ಕರ್‌ರ ಪುತ್ಥಳಿಯನ್ನು ಹಲವು ತಿಂಗಳಿಂದ ಬಟ್ಟೆಯನ್ನು ಸುತ್ತಿ ಅವಮಾನಿಸಿದ ತಾಲೂಕು ಆಡಳಿತ, ಜಿಲ್ಲಾಡಳಿತ ಮತ್ತು ಸಚಿವ ಡಾ.ಎಂ.ಸಿ.ಸುಧಾಕರ್‌ ಅವಮಾನಿಸಿದ್ದಾರೆ. ಕೂಡಲೇ ಸಿದ್ಧರಾಮಯ್ಯನವರು ಇತ್ತ ಗಮನ ಹರಿಸಿ ಪುತ್ಥಳಿ ವಿವಾದವನ್ನು ಬಗೆಹರಿಸಬೇಕು ಇಲ್ಲದಿದ್ದ ಪಕ್ಷದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕವಾಲಿ ವೆಂಕಟರವಣಪ್ಪ, ವಿಜಯನರಸಿಂಹ, ಜನನಾಗಪ್ಪ, ಜನಾರ್ಧನ್, ವಕೀಲ ಗೋಪಿ, ನವೀನ್ ಜಿ ಕೃಷ್ಣ ಜನಾರ್ಧನ್, ದಲಿತ ಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜೆಡಿಎಸ್‌, ಬಿಜೆಪಿ ಬೆಂಬಲ

ಅಂಬೇಡ್ಕರ್‌ರ ಪುತ್ಥಳಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ಮೇ ೨೨ ರಂದು ದಲಿತಪರ ಸಂಘಟನೆಗಳ ಒಕ್ಕೂಟ ನೀಡಿರುವ ಬಂದ್‌ ಕರೆಗೆ ಜೆಡಿಎಸ್‌ನ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಾಗೂ ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಾಕ್ಸ್‌...............................

ಚಿಂತಾಮಣಿಯಲ್ಲಿ ನಿಷೇಧಾಜ್ಞೆ

ಚಿಂತಾಮಣಿ: ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ರಾತ್ರೋ ರಾತ್ರಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಮೇ. 22ರಂದು ಚಿಂತಾಮಣಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಸುದರ್ಶನ್ ಯಾದವ್ ರವರು ಚಿಂತಾಮಣಿ ನಗರದಲ್ಲಿ ಮಂಗಳವಾರ ಸಂಜೆಯಿಂದ ಮೇ.೨೩ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ನಗರದ ಅಂಜನಿ ಬಡಾವಣೆ, ಎನ್.ಆರ್ ಬಡಾವಣೆ, ವಿನೋಬಾ ಕಾಲೋನಿ, ಕೆ.ಆರ್ ಬಡಾವಣೆ, ಗಜಾನನ ವೃತ್ತ, ಆಜಾದ್ ಚೌಕ್, ಬೆಂಗಳೂರು ವೃತ್ತ, ತಪಥೇಶ್ವರ ಕಾಲೋನಿ ಮತ್ತು ನಗರದ ಸರ್ಕಾರಿ ಕಚೇರಿಗಳ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೀಸಲು ಪಡೆ ವಾಹನಗಳು, ೨೦೦ಕ್ಕೂ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ
ಕರ್ನಾಟಕಕ್ಕೆ ಇನ್ನೊಂದು ‘ಜಲಸಮರ’ದ ಕಂಟಕ!