- ಚಿತ್ರದುರ್ಗ ಜಿಲ್ಲೆ ಹುಲ್ಲೇಹಾಳ್ ಗ್ರಾಮದ ಕೃಷಿಕ ಎಚ್.ಟಿ. ಸದ್ರುಲ್ಲಾ ಖಾನ್ (40) ಬಂಧಿತ ಆರೋಪಿ
- ಬೆಂಗಳೂರಿನ ವಿಧಾನಸೌಧ, ಗೋವಿಂದರಾಜ ನಗರ, ಹೆಬ್ಬಗೋಡಿ, ಚಿತ್ರದುರ್ಗ ಕೋಟೆ, ಕೋಲಾರದ ಗೌಣಿಪಲ್ಲಿ ಠಾಣೆಗಳಲ್ಲೂ ಪ್ರಕರಣ
- - - ಕನ್ನಡಪ್ರಭ ವಾರ್ತೆ ದಾವಣಗೆರೆರಾಜೀವ್ ಗಾಂಧಿ ಆರೋಗ್ಯ ವಿವಿ ಹಾಗೂ ಬೆಳಗಾವಿಯ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ವೈದ್ಯರ ಪತ್ನಿಯೊಬ್ಬರಿಗೆ ₹2.78 ಲಕ್ಷ ವಂಚಿಸಿದ್ದ ಚಿತ್ರದುರ್ಗ ಜಿಲ್ಲೆ ಮೂಲದ ಆರೋಪಿಯನ್ನು ಸಿಇಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ವೈದ್ಯರೊಬ್ಬರಿಗೆ ಫೆ.20ರಂದು ಫೋನ್ ಮಾಡಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ನಾಮನಿರ್ದೇಶನ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿದ್ದಾನೆ. ವೈದ್ಯರ ಪತ್ನಿಗೂ ಬೆಳಗಾವಿ ವಿಟಿಯುನಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ರಾಜ್ಯಪಾಲರ ಸೆಕ್ರೆಟರಿಯೇಟ್ ಆಗಿ ರಾಜ್ಯಪಾಲರ ಕಚೇರಿಯಲ್ಲಿ ತಾನು ಕಾರ್ಯನಿರ್ವಹಿಸುತ್ತಿದ್ದು, ನಾಮ ನಿರ್ದೇಶಿತ ಸದಸ್ಯರನ್ನು ನಾಮಿನೇಟ್ ಮಾಡುವುದಾಗಿಯೂ ಆರೋಪಿ ಎಚ್.ಟಿ.ಸದ್ರುಲ್ಲಾ ಖಾನ್ ನಂಬಿಸಿದ್ದನು.
ತಕ್ಷಣ ವೈದ್ಯರು ದಾವಣಗೆರೆ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಸಿಇಎನ್ ಅಪರಾಧ ಠಾಣೆ ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಪ್ರಭಾರ ಇನ್‌ಸ್ಪೆಕ್ಟರ್ ವೈ.ಶಿಲ್ಪ, ಸುನೀಲ ತೇಲಿ, ಪಿಎಸ್ಐ ರೂಪಾ ತೆಂಬದ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದರು.
ಆರೋಪಿ ಸದ್ರುಲ್ಲಾ ಖಾನ್ ಈ ಹಿಂದೆಯೂ ಇದೇ ರೀತಿ ಹಲವರಿಗೆ ವಂಚಿಸಿರುವ ಬಗ್ಗೆ ಬೆಂಗಳೂರಿನ ವಿಧಾನಸೌಧ, ಗೋವಿಂದರಾಜ ನಗರ, ಹೆಬ್ಬಗೋಡಿ, ಚಿತ್ರದುರ್ಗ ಕೋಟೆ, ಕೋಲಾರದ ಗೌಣಿಪಲ್ಲಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಎಚ್.ಟಿ.ಸದ್ರುಲ್ಲಾ ಖಾನ್