ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲೆಗೆ ಶೇ.59.87 ರಷ್ಟು ಫಲಿತಾಂಶ ಲಭಿಸಿದೆ.
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 4,590 ವಿದ್ಯಾರ್ಥಿಗಳ ಪೈಕಿ 1,684 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 3,746 ವಿದ್ಯಾರ್ಥಿಗಳ ಪೈಕಿ 2,192 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 6,425 ವಿದ್ಯಾರ್ಥಿಗಳಲ್ಲಿ 4,330 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ 14,761 ವಿದ್ಯಾರ್ಥಿಗಳಲ್ಲಿ 8,206 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಪರೀಕ್ಷೆಗೆ ಹಾಜರಾದ 13,426 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 8,038 ತೇರ್ಗಡೆಯಾಗಿದ್ದಾರೆ. 1,082 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ 253 ಖಾಸಗಿ ವಿದ್ಯಾರ್ಥಿಗಳಲ್ಲಿ 61 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಚಿತ್ರದುರ್ಗ ತಾಲೂಕಿನ ಸಿರಿಗೆರೆಯ ಬಿ.ಲಿಂಗಯ್ಯ ಪಿಯು ಕಾಲೇಜು ವಿದ್ಯಾರ್ಥಿ ಪಾಂಡುರಂಗ ಆನೆಗೊಂದಿ 586 (ಶೇ.97.66) ಅಂಕ ಗಳಿಸುವುದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಹೊಳಲ್ಕೆರೆ ತಾಲೂಕಿನ ಮುತ್ತಗದೂರು ಗ್ರಾಮದ ತರಳಬಾಳು ಪಿಯು ಕಾಲೇಜಿನ ಅಂಜುಮನ್ ಬಾನು ಎಚ್.ಎಸ್ 581 (ಶೇ.96.83) ಹಾಗೂ ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಆಂಜನೇಯ ಪಿಯು ಕಾಲೇಜಿನ ಸಮೀನ ಜೆ. 579 (ಶೇ.96.5) ಅಂಕಗಳಿಸುವುದರೊಂದಿಗೆ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗ ನಗರದ ಡಾನ್ ಬಾಸ್ಕೋ ಪಿಯು ಕಾಲೇಜು ವಿದ್ಯಾರ್ಥಿ ಮಾರುತಿ ಎಂ. 593 (ಶೇ.98.83) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ಚಿತ್ರದುರ್ಗ ನಗರದ ಎಸ್ಆರ್ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ವಿಜೇತರೆಡ್ಡಿ ಬಿ.ಸಿ 589 (ಶೇ.98.16) ಹಾಗೂ ಅಮರೇಶ್ 587 (ಶೇ.97.83) ಅಂಕಗಳನ್ನು ಗಳಿಸುವ ಮೂಲಕ ಅನುಕ್ರಮವಾಗಿ ಜಿಲ್ಲೆಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಎಸ್‌ಆರ್‌ಎಸ್ ಕಾಲೇಜಿಗೆ ಮೊದಲ ಮೂರು ಸ್ಥಾನ
ಚಿತ್ರದುರ್ಗದ ಪ್ರತಿಷ್ಠಿತ ಎಸ್‌ಆರ್‌ಎಸ್ ಪಿಯು ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಜಿಲ್ಲೆಯ ಮೊದಲ ಮೂರು ಸ್ಥಾನಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.