ಚಿತ್ರದುರ್ಗಕ್ಕೆ ಕಲ್ಯಾಣ ಕರ್ನಾಟಕ ಮಾದರಿ ವಿಶೇಷ ಪ್ಯಾಕೇಜ್ ಅಗತ್ಯ

KannadaprabhaNewsNetwork |  
Published : Apr 28, 2025, 11:48 PM IST
ಚಿತ್ರದುರ್ಗ ಮೂರನೇ ಪುಟದ ಲೀಡ್   | Kannada Prabha

ಸಾರಾಂಶ

ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಾದೇಸಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯಲ್ಲಿ ಸಚಿವ ಡಿ.ಸುಧಾಕರ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಗುಲ್ಬರ್ಗ ವಿಭಾಗದ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ನೀಡಿರುವ ವಿಶೇಷ ಯೋಜನೆಗಳ ಮಾದರಿಯ ಚಿತ್ರದುರ್ಗಜಿಲ್ಲೆಗೆ ಅಳವಡಿಸುವುದು ಅಗತ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿಪಾದಿಸಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಬೆಂಗಳೂರು ವಿಭಾಗದ ಮಟ್ಟದ ಸಂವಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಶೇಷ ಯೋಜನೆಗಳು ಕನಿಷ್ಠ 10 ವರ್ಷಗಳವರೆಗೆ ಜಾರಿಯಲ್ಲಿರಬೇಕು ಎಂದರು.

ಚಿತ್ರದುರ್ಗ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಶೇ.90ರಷ್ಟು ಇದ್ದಾರೆ. ಪ್ರತಿ ತಾಲೂಕಿನಿಂದಲೂ ಸಾವಿರಾರು ಜನ ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕೆಲಸ ಅರಸಿಕೊಂಡು ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಹಿರಿಯೂರಿನಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ತಾಲೂಕಿನ ಏಳೆಂಟು ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾಲಂಭಿಯಾಗಲು ಸಹಕಾರಿಯಾಗಿದೆ.

ಮಧ್ಯ ಕರ್ನಾಟಕ ಭಾಗಕ್ಕೆ ವಾಣಿ ವಿಲಾಸ ಸಾಗರ ಜಲಾಶಯ ಜೀವನಾಡಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕೃಷ್ಣರಾಜ ಸಾಗರ ಮಾದರಿಯಲ್ಲಿ ವಿವಿ ಸಾಗರ ಬಳಿ ಉದ್ಯಾನವನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಲಾಗುವುದು. ಜಿಲ್ಲೆಯ 3 ತಾಲೂಕುಗಳಿಗೆ ಕೆಎಂಇಆರ್‌ಸಿ ಹಾಗೂ ಡಿಎಂಎಫ್ ಅಡಿ ವರ್ಷಕ್ಕೆ 500 ಕೋಟಿ ರು.ಅಭಿವೃದ್ಧಿ ಅನುದಾನ ದೊರಕುತ್ತದೆ.

ಆದರೆ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲೂಕುಗಳಿಗೆ ಈ ಅನುದಾನ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಸಮತೋಲನ ನಿವಾರಣಾ ಸಮತಿ ಜಿಲ್ಲೆಗೆ ವಿಶೇಷ ಅನುದಾನ ಪ್ಯಾಕೇಜ್ ನೀಡುವಂತೆ ಶಿಫಾರಸ್ಸು ಮಾಡಬೇಕು ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಗೋವಿಂದರಾವ್ ಮಾತನಾಡಿ, 23 ವರ್ಷಗಳ ಹಿಂದೆ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಜ್ಯದ 175 ತಾಲೂಕುಗಳನ್ನು ಅಧ್ಯಯನ ಮಾಡಿದ್ದ ಡಾ.ಡಿ.ಎಂ.ನಂಜುಂಡಪ್ಪ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ವರದಿ ಶಿಫಾರಸ್ಸಿನ ಅನ್ವಯ, ಸರ್ಕಾರ 2007-08 ರಿಂದ 2023-24 ರವರೆಗೆ 45,789 ಕೋಟಿ ರು.ಹಂಚಿಕೆ ಮಾಡಿತ್ತು. ಇದರಲ್ಲಿ 37,661 ಕೋಟಿ ರು. ಬಿಡುಗಡೆಯಾಗಿದ್ದು, ಈ ಪೈಕಿ 34,381 ಕೋಟಿ ರು. ಖರ್ಚಾಗಿದೆ.

ಇಷ್ಟೊಂದು ಹಣ ಖರ್ಚು ಮಾಡಿದ ಬಳಿಕ, ತಾಲೂಕುಗಳ ಹಿಂದುಳಿದಿರುವಿಕೆ ಕಡಿಮೆ ಆಗಿದೆಯೇ, ಯಾವೆಲ್ಲಾ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿಯಾಗಿದೆ. ಹಣ ನೀಡಿದರೂ ಅಭಿವೃದ್ಧಿ ಆಗಲಿಲ್ಲವೆಂದರೆ ಅದಕ್ಕೆ ಕಾರಣಗಳೇನು, ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ, ರಾಜ್ಯದಲ್ಲಿನ ಅಸಮತೋಲನ ಸರಿಪಡಿಸಲು ಏನೆಲ್ಲ ಕ್ರಮ ವಹಿಸಬೇಕು ಎನ್ನುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಮಾರ್ಚ್-2024ರಲ್ಲಿ ರಚಿಸಲಾಗಿದ್ದರೂ, ಸೆಪ್ಟೆಂಬರ್-2024ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಎಂದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ದೇಶದಲ್ಲಿ ಸದಾ ಬರಗಾಲಕ್ಕೆ ತುತ್ತಾಗುವ 16 ಜಿಲ್ಲೆಗಳ ಪೈಕಿ ಚಿತ್ರದುರ್ಗ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯ ಬಹುತೇಕ ರೈತರು ಮಳೆ ಆಶ್ರಿತ ಒಣ ಬೇಸಾಯ ನಂಬಿಕೊಂಡಿದ್ದಾರೆ. ಬ್ಯಾಂಕುಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಲ ಸೌಲಭ್ಯ ನೀಡುವಲ್ಲಿ ಕ್ರಮ ವಹಿಸಿಲ್ಲ. ಜಿಲ್ಲೆಯಲ್ಲಿ ಉತ್ತಮ ಖನಿಜ ಸಂಪತ್ತು ಇದೆ. ಈ ಖನಿಜ ಸಂಪತ್ತು ಜಿಲ್ಲೆಯಲ್ಲಿಯೇ ಸಂಸ್ಕರಿಸಿ ರಪ್ತು ಮಾಡಿದರೆ, ಜಿಲ್ಲೆಗೆ ಅಭಿವೃದ್ಧಿಗೆ ಪೂರಕವಾಗಲಿದೆ. ಜನರಿಗೂ ಉದ್ಯೋಗವಕಾಶಗಳು ಲಭಿಸುತ್ತವೆ. ಈ ನಿಟ್ಟಿನಲ್ಲಿ ಸಮಿತಿ ವರದಿ ನೀಡುವಂತೆ ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ಪ್ರಾದೇಶಿಕ ಅಸಮತೋಲನ ಸೂಚ್ಯಂಕದಲ್ಲಿ ತಾಲೂಕನ್ನು ಘಟಕವಾಗಿ ಪರಿಗಣಿಸಿ, ಅಭಿವೃದ್ಧಿ, ಹಿಂದುಳಿದಿರುವಿಕೆ ಎಂದು ವರ್ಗೀಕರಣ ಮಾಡಲಾಗುತ್ತಿದೆ. ಆದರೆ ಮುಂದುವರೆದ ತಾಲೂಕಿನಲ್ಲಿಯೂ ಕೆಲವು ಹೋಬಳಿಗಳು ಪ್ರಾದೇಶಿಕ ಅಸಮಾತೋಲನಕ್ಕೆ ತುತ್ತಾಗಿವೆ. ಈ ಹಿನ್ನಲೆಯಲ್ಲಿ ಹೋಬಳಿಯನ್ನು ಘಟಕವಾಗಿ ಪರಿಗಣಿಸಿ, ವರದಿ ಶಿಫಾರಸ್ಸು ಮಾಡುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.

ಜಿಲ್ಲೆಯ ತಾಮ್ರ ಅದಿರಿನ ಗಣಿಗಾರಿಕೆಯನ್ನು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿಲೀನ ಮಾಡಲಾಗಿದೆ.

ಸದ್ಯ ಜಿಲ್ಲೆಯ ತಾಮ್ರ ಗಣಿಗಾರಿಕೆ ಮುಚ್ಚಿದೆ. ಪ್ರಸ್ತುತ ತಾಮ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹಟ್ಟಿ ಚಿನ್ನದ ಗಣಿ ಕಂಪನಿ ವಾರ್ಷಿಕವಾಗಿ 1000 ಕೋಟಿ ರು. ಲಾಭಮಾಡುತ್ತಿದೆ. ಇದರಲ್ಲಿ ಜಿಲ್ಲೆಯ ತಾಮ್ರ ಅದಿರಿನ ಗಣಿ ಪುನಶ್ಚೇತನಕ್ಕೆ ರು.100 ಕೋಟಿ ಬಿಡುಗಡೆ ಮಾಡಿದರೆ, ಜನರಿಗೆ ಉದ್ಯೋಗವಕಾಶಗಳು ದೊರಕುತ್ತವೆ ಎಂದು ವಿಪ ಸದಸ್ಯ ಕೆ.ಎಸ್ ನವೀನ್ ಸಲಹೆ ಮಾಡಿದರು.

ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ 100 ವರ್ಷಗಳ ಇತಿಹಾಸದಲ್ಲಿ 79 ವರ್ಷ ಬರಗಾಲಕ್ಕೆ ತುತ್ತಾಗಿದೆ. ಶೇ.30ರಷ್ಟು ಜನರು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಈ ಹಿಂದೆ ನಂಜುಂಡಪ್ಪ ವರದಿ ಆಧಾರಿಸಿ ನೀಡಿದ ವಿಶೇಷ ಅಭಿವೃದ್ಧಿ ಯೋಜನೆ ಅನುದಾನದಿಂದ ಸರ್ವಾಂಗೀಣ ಅಭಿವೃದ್ಧಿ ಆಗಿಲ್ಲವೆಂದರು.

ಶಾಸಕ ವೀರೇಂದ್ರಪಪ್ಪಿ,ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ಆರ್.ವಿಶಾಲ್, ಸದಸ್ಯರಾದ ಡಾ.ಎಸ್.ಟಿ.ಬಾಗಲಕೋಟೆ, ಕೆ.ಎನ್.ಸಂಗೀತ, ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಸೇರಿದಂತೆ ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ