ಒಂದು ಪೋಕ್ಸೋ ಕೇಸಲ್ಲಿ ಮುರುಘಾ ಶ್ರೀ ನಿರ್ದೋಷಿ, ಇನ್ನೊಂದು ಕೇಸು ಬಾಕಿ

Published : Nov 27, 2025, 05:02 AM IST
Murugha

ಸಾರಾಂಶ

ರಾಜ್ಯಾದ್ಯಂತ ಸದ್ದು ಮಾಡಿದ್ದ ಹಾಗೂ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂ*ಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೊ ಪ್ರಕರಣದಡಿ ವಿಚಾರಣೆ ಎದುರಿಸುತ್ತಿದ್ದ ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದ ಶಿವಮೂರ್ತಿ ಮುರುಘಾಶರಣರಿಗೆ ಚಿತ್ರದುರ್ಗ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ.

 ಚಿತ್ರದುರ್ಗ :  ಇಡೀ ರಾಜ್ಯಾದ್ಯಂತ ಸದ್ದು ಮಾಡಿದ್ದ ಹಾಗೂ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂ*ಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೊ ಪ್ರಕರಣದಡಿ ವಿಚಾರಣೆ ಎದುರಿಸುತ್ತಿದ್ದ ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದ ಶಿವಮೂರ್ತಿ ಮುರುಘಾಶರಣರಿಗೆ ಚಿತ್ರದುರ್ಗ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. ಮೊದಲ ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗದ 2ನೇ ಸತ್ರ ನ್ಯಾಯಾಲಯ, ಮುರುಘಾಶ್ರೀಗಳು, ಹಾಸ್ಟೆಲ್‌ ವಾರ್ಡನ್ ರಶ್ಮಿ ಮತ್ತು ಮ್ಯಾನೇಜರ್ ಪರಮಶಿವಯ್ಯ ಅವರನ್ನು ನಿರ್ದೋಷಿಗಳೆಂದು ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಹಡಪದ, ನವೆಂಬರ್ 26ರಂದು ತೀರ್ಪು ಕಾಯ್ದಿರಿಸಿದ್ದರು. ಬುಧವಾರ ತೀರ್ಪು ಪ್ರಕಟಿಸಿದ್ದಾರೆ. ಆರೋಪ ಸಾಬೀತುಪಡಿಸುವಲ್ಲಿ ಪ್ರಾಷಿಕ್ಯೂಷನ್ ವಿಫಲವಾಗಿದೆ ಎಂದು ತಿಳಿಸಿ ಮೂವರನ್ನು ಆರೋಪಮುಕ್ತಗೊಳಿಸಿದ್ದಾರೆ.

ಈ ಮಧ್ಯೆ, ಮೊದಲ ಪ್ರಕರಣದಲ್ಲಿ ಮುರುಘಾಶ್ರೀಗಳು ನಿರ್ದೋಷಿ ಎಂದು ಘೋಷಣೆಯಾದರೂ ಅವರು ಮುರುಘಾಮಠ ಪ್ರವೇಶಿಸುವಂತಿಲ್ಲ. ಮತ್ತಿಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಶರಣರ ವಿರುದ್ಧ ಲೈಂ*ಕ ಕಿರುಕುಳ ಆರೋಪ ಹೊರಿಸಿದ್ದು, ಈ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ. ಅಲ್ಲದೇ, ಚಿತ್ರದುರ್ಗ ಪ್ರವೇಶಕ್ಕೆ ಅವರಿಗೆ ನಿರ್ಬಂಧ ವಿಧಿಸಿದೆ. ಹೀಗಾಗಿ, ಮೊದಲ ಪ್ರಕರಣದಲ್ಲಿ ಮುರುಘಾಶ್ರೀಗೆ ರಿಲೀಫ್ ಸಿಕ್ಕರೂ, ನ್ಯಾಯಾಲಯದ ಅನುಮತಿ ಇಲ್ಲದೆ ಅವರು ಮಠ ಪ್ರವೇಶಿಸುವಂತಿಲ್ಲ.

ಪ್ರಕರಣವೇನು?:

ಮುರುಘಾ ಶರಣರು ತಮ್ಮ ಮೇಲೆ ಲೈಂ*ಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಠದ ಹಾಸ್ಟೇಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು 2022ರ ಆಗಸ್ಟ್‌ 26ರಂದು ಮೈಸೂರಿನ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಾರ್ಡನ್ ರಶ್ಮಿ, ಬಸವಾದಿತ್ಯ, ಮ್ಯಾನೇಜರ್ ಪರಮಶಿವಯ್ಯ, ವಕೀಲ ಗಂಗಾಧರ, ಮುರುಘಾಶ್ರೀ ಸಹಾಯಕ ಮಹಾಲಿಂಗ, ಅಡುಗೆಭಟ್ಟ ಕರಿಬಸಪ್ಪ ವಿರುದ್ದವೂ ಪ್ರಕರಣ ದಾಖಲಾಗಿತ್ತು. ಬಳಿಕ, ಆಗಸ್ಟ್ 27ರಂದು ಪ್ರಕರಣವನ್ನು ಚಿತ್ರದುರ್ಗ ಮುರುಘಾಮಠದ ವ್ಯಾಪ್ತಿಗೆ ಬರುವ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣದಡಿ 2022ರ ಸೆ.1ರಂದು ಪೊಲೀಸರು ಶರಣರನ್ನು ಬಂಧಿಸಿದ್ದರು.

ಇದಾದ ಒಂದೂವರೆ ತಿಂಗಳ ನಂತರ 2022ರ ಅಕ್ಟೋಬರ್ 13 ರಂದು ನಜರ್‌ಬಾದ್ ಠಾಣೆಯಲ್ಲಿ ಮಠದ ಅಡುಗೆ ಸಹಾಯಕಿ ಮತ್ತೊಂದು ದೂರು ದಾಖಲಿಸಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂ*ಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದರು.

ಈ ಮಧ್ಯೆ, 2023ರ ನವಂಬರ್‌ 8ರಂದು ಕರ್ನಾಟಕ ಹೈಕೋರ್ಟ್ ಮುರುಘಾ ಶ್ರೀಗೆ ಜಾಮೀನು ನೀಡಿತ್ತು. ಆದರೆ, 2ನೇ ಫೋಕ್ಸೋ ಕೇಸಲ್ಲಿ ಜಾಮೀನು ಪಡೆಯದ ಹಿನ್ನೆಲೆಯಲ್ಲಿ 2023ರ ನ.20 ರಂದು ಮುರುಘಾಶ್ರೀ ಬಂಧನವಾಗಿತ್ತು. ಅಂದೇ ಸಂಜೆ, ಹೈಕೋರ್ಟ್ ಸೂಚನೆ ಮೇರೆಗೆ ಮತ್ತೆ ಬಿಡುಗಡೆಯಾಗಿದ್ದರು. ಈ ಮಧ್ಯೆ, ಮುರುಘಾಶ್ರೀ ಜಾಮೀನು ರದ್ದು ಕೋರಿ ಸಂತ್ರಸ್ತೆಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮುಖ್ಯಸಾಕ್ಷಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಶರಣರನ್ನು ಬಂಧನದಲ್ಲಿಡಲು ಕೋರ್ಟ್‌ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ 2024ರ ಮೇ 27ರಂದು ಸ್ಥಳೀಯ ಕೋರ್ಟ್ ಎದುರು ಶರಣಾದ ಮುರುಘಾಶ್ರೀಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ, ಸಂತ್ರಸ್ತೆಯರಿಬ್ಬರು ಸೇರಿ 13 ಜನರ ಸಾಕ್ಷಿಯ ವಿಚಾರಣೆ ಅಂತ್ಯಗೊಂಡ ಹಿನ್ನೆಲೆಯಲ್ಲಿ 2024ರ ಅಕ್ಟೋಬರ್‌ 7ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಶೀಘ್ರ ಎಲ್ಲ ಹೇಳುವೆ

ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು. ಈಗ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಆದಷ್ಟೂ ಮೌನವಾಗಿರಲು ಬಯಸುತ್ತೇನೆ. ಶೀಘ್ರವೇ ಸುದ್ದಿಗೋಷ್ಠಿ ನಡೆಸಿ, ಎಲ್ಲವನ್ನೂ ವಿವರಿಸುವೆ.

- ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ ಬೃಹನ್ಮಠ

ಮೇಲ್ಮನವಿ ಹಾಕ್ತೇವೆ

ಮುರುಘಾ ಶ್ರೀ ನಿರಪರಾಧಿ ಎಂಬ ತೀರ್ಪು ನಿರಾಶೆ ಮೂಡಿಸಿದೆ. ಮಕ್ಕಳ ಅಭಿಪ್ರಾಯ ಪಡೆದು ಮುಂದಿನ ಹೋರಾಟ ಮುಂದುವರಿಸುವೆ. ನಾನು ಸದಾ ಮಕ್ಕಳ ಪರ ಇರುತ್ತೇನೆ.

ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ ಸಂಸ್ಥಾಪಕ

ಶ್ರೀಗಳು ಪೂರ್ತಿ ನಿರ್ದೋಷಿ ಏಕಲ್ಲ?

ಮುರುಘಾ ಶರಣರ ಮೇಲೆ 2 ಪೋಕ್ಸೋ ಕೇಸು ಇವೆ. ಇಬ್ಬರು ವಿದ್ಯಾರ್ಥಿನಿಯರು ನೀಡಿದ್ದ ಮೊದಲ ಕೇಸಲ್ಲಿ ಅವರು ಈಗ ನಿರ್ದೋಷಿ ಆಗಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿನಿಯರು ನೀಡಿದ್ದ ದೂರಿನ 2ನೇ ಪ್ರಕರಣ ಇನ್ನೂ ಬಾಕಿ ಇದೆ. ಆದರೆ ಅದರ ವಿಚಾರಣೆಗೆ ಈಗಾಗಲೇ ಹೈಕೋರ್ಟ್‌ ತಡೆ ನೀಡಿದೆ. ಇನ್ನೂ ಅವರ ಹಣೆಬರಹ ಆ ಪ್ರಕರಣದಲ್ಲಿ ನಿರ್ಧಾರ ಆಗಿಲ್ಲ.

PREV
Read more Articles on

Recommended Stories

ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಿ
ಭಾರತ ಸಂವಿಧಾನ ರಕ್ಷಿಸುವ ಸಂಕಲ್ಪ ಮಾಡೋಣ: ಶಾಸಕ ಟಿ.ರಘುಮೂರ್ತಿ