ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿ ಶಿಕ್ಷಕಿಯೊಬ್ಬರು ಮೃತ ಪಟ್ಟಿರುವುದಾಗಿ ರಾಂಪುರ ಖಾಸಗೀ ಆಸ್ಪತ್ರೆಯ ವೈದ್ಯರ ಮೇಲೆ ಪ್ರಕರಣ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.ಮೃತ ಪಟ್ಟಿರುವ ಶಿಕ್ಷಕಿ ಪವಿತ್ರ(30) ಮೂಲತಃ ಚಿಕ್ಕಮಂಗಳೂರಿನ ತರೀಕೆರೆ ಮೂಲದವರು ಎನ್ನಲಾಗಿದೆ. ಇವರು ತಾಲೂಕಿನ ದೇವಸಮುದ್ರ ಹೋಬಳಿ ವ್ಯಾಪ್ತಿ ಬಾಂಡ್ರವಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಗ್ರಾಮದ ಲೋಟಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಮೇಲೆ ಗಂಬೀರ ಆರೋಪ ವ್ಯಕ್ತವಾಗಿದೆ.
6 ತಿಂಗಳ ಗರ್ಭಿಣಿಯಾಗಿದ್ದ ಮೃತ ಶಿಕ್ಷಕಿ, ಮೂರು ದಿನಗಳ ಹಿಂದೆ ರಾಂಪುರ ಲೋಟಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆಗೆಂದು ಹೋಗಿದ್ದ ವೇಳೆ ತಪಾಸಣೆ ನಡೆಸಿದ ಅಲ್ಲಿನ ವೈದ್ಯರು ಮಗುವಿನ ಹೃದಯ ಬಡಿತ ನಿಂತಿದೆ. ದೃಡೀಕರಿಸಲು ಸ್ಕ್ಯಾನಿಂಗ್ ವರದಿ ತರುವಂತೆ ಸೂಚಿಸಿದ್ದಾರೆ. ಆ ಪ್ರಕಾರವಾಗಿ ಬಳ್ಳಾರಿಯ ಡಯೋಗ್ನೋಸ್ಟಿಕ್ ಸೆಂಟರ್ ತೆರಳಿ ಶಿಕ್ಷಕಿ ಸ್ಕ್ಯಾನಿಂಗ್ ವರದಿ ನೀಡಿದ್ದರು. ಮಗು ಮೃತ ಪಟ್ಟಿದ್ದು ಶಸ್ತ್ರ ಚಿಕಿತ್ಸೆ ಅಗತ್ಯ ಎಂದು ರಾತ್ರಿ 7.ರ ಸುಮಾರಿಗೆ ದಾಖಲು ಮಾಡಿಕೊಂಡು ಮಧ್ಯ ರಾತ್ರಿ 12ರ ನಂತರ ಚಿಕಿತ್ಸೆ ಆರಂಭಿಸಿದರು. ವೈದ್ಯರ ನಿರ್ಲಕ್ಷದಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಿರುವುದೇ ಘಟನೆಗೆ ಕಾರಣ ಎಂದು ರಾಂಪುರ ಠಾಣೆಯಲ್ಲಿ ಮೃತ ಗರ್ಭಿಣಿಯ ಪತಿ ಶಶಿಧರ ದೂರಿನಲ್ಲಿ ವಿವರಿಸಿದ್ದಾರೆ.ಗರ್ಭಿಣಿ ಸಾವಿನ ಘಟನೆಗೆ ಸಂಬಂಧಿಸಿದಂತೆ ಲೋಟಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ದಸಂಸ ಮುಖಂಡರು ಪ್ರತಿಭಟನೆ ನಡೆಸಿದರು.
ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಶಬ್ಬೀರ್, ಗ್ರಾಮದಲ್ಲಿ ಖಾಸಗೀ ಆಸ್ಪತ್ರೆ ನಡೆಸುತ್ತಿದ್ದಾರೆ. ತಜ್ಞ ವೈದ್ಯರು ಇಲ್ಲದೆ ಗರ್ಭಿಣಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಿದ್ದಾರೆ. ಹೊಟ್ಟೆಯಲ್ಲಿಯೇ ಮಗು ಮೃತ ಪಟ್ಟಿರುವ ಮಾಹಿತಿ ಇದ್ದರೂ ಸಕಾಲಕ್ಕೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡಿರುವುದೇ ಗರ್ಭಿಣಿ ಶಿಕ್ಷಕಿಯ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿರುವ ಅವರು, ನಿರ್ಲಕ್ಷ ವಹಿಸಿರುವ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ತಹಸೀಲ್ದಾರ್ ಎಂ.ವಿ.ರೂಪ ಸಿಪಿಐ ವಸಂತ ವಿ ಅಸೋದೆ, ಪಿಎಸ್‌ಐ ಮಹೇಶ, ಬಿಇಒ ನಿರ್ಮಲಾ ದೇವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮದುಕುಮಾರ್ ಸ್ಥಳಕ್ಕೆ ಆಗಮಿಸಿ, ಕುಟುಂಬಸ್ಥರೊಂದಿಗೆ ಚರ್ಚಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕಳಿಸಲಾಯಿತು. ನೆಚ್ಚಿನ ಶಿಕ್ಷಕಿಯನ್ನು ಕಳೆದುಕೊಂಡ ಬಾಂಡ್ರವಿ ಶಾಲಾ ಮಕ್ಕಳ ರೋಧನೆ ಮನಕಲುಕುವಂತಿತ್ತು.
ಈ ವೇಳೆ ದಸಂಸ ಸಂಚಾಲಕ ಕೊಂಡಾಪುರ ಪರಮೇಶ,ತಾಪಂ ಮಾಜಿ ಸದಸ್ಯ ದಡಗೂರು ಮಂಜುನಾಥ, ವಡೇರಹಳ್ಳಿ ಬಸವರಾಜ, ಹೊಸ ಕೆರೆ ಬಸವರಾಜ, ಇಟ್ಟಿಗೆ ರಾಜಣ್ಣ, ನಾಗರಾಜ, ಬೊಮ್ಮಕ್ಕನಹಳ್ಳಿ ಸ್ವಾಮಿ ಇದ್ದರು.