ಹಿಂಗಾರು ಬಿತ್ತನೆಗೆ ಚಿತ್ತಿ ಮಳೆ ಅಡ್ಡಿ!

KannadaprabhaNewsNetwork | Published : Oct 23, 2024 12:37 AM

ಸಾರಾಂಶ

ಈ ಬಾರಿ 2.01 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯಿಂದ ಹೊಲಗಳಲ್ಲಿ ನೀರು ತುಂಬಿಕೊಂಡಿದೆ. ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ.

ಹುಬ್ಬಳ್ಳಿ:

ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜಮೀನುಗಳು ಜಲಾವೃತವಾಗಿವೆ. ಹೀಗಾಗಿ ಈ ವರ್ಷ ಹಿಂಗಾರಿ ಬಿತ್ತನೆಯೇ ಆಗಿಲ್ಲ. ಅಲ್ಪಸ್ವಲ್ಪ ಆಗಿದ್ದರೂ ಅದು ಕೂಡ ಮಳೆಯಲ್ಲಿ ಕೊಚ್ಚಿಹೋಗಿದೆ. ಮುಂಗಾರಿನಲ್ಲಿನ ಬೆಳೆಗಳೆಲ್ಲ ಮಳೆಗೆ ಕೊಳೆತು ಕೈಗೆ ಸಿಗದಂತೆ ಆಗಿವೆ.

ಈ ವರ್ಷ ರೈತರ ಗೋಳು ಕೇಳುವಂತೆಯೇ ಇಲ್ಲ. ಅತ್ತ ಮುಂಗಾರು ಬೆಳೆಯೂ ಸರಿಯಾಗಿ ಬರಲಿಲ್ಲ. ಇತ್ತ ಹಿಂಗಾರು ಕೈಹಿಡಿಯಲಿಲ್ಲ. ಹಿಂಗಾರು ಕೈಹಿಡುತ್ತದೆ ಎಂಬ ಆಶಾಭಾವನೆಯಿಂದ ರೈತರು ಬೀಜ, ಗೊಬ್ಬರ ಖರೀದಿಸಿದ್ದರು. ಆದರೆ ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಮಾಡಲು ಆಗುತ್ತಿಲ್ಲ. ಜಮೀನುಗಳು ಜಾಲವೃತವಾಗಿದ್ದು ಕಾಲಿಡಲು ಆಗುತ್ತಿಲ್ಲ.

ಮಳೆ ಪ್ರಮಾಣ:

ಹಿಂಗಾರು ಪ್ರಾರಂಭವಾಗುವುದೇ ಅಕ್ಟೋಬರ್‌ನಿಂದ. ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದ ಭೂಮಿ ಹದ ಮಾಡಿಟ್ಟುಕೊಂಡು ಅಕ್ಟೋಬರ್‌ನಲ್ಲಿ ಬಿತ್ತನೆ ಮಾಡುತ್ತಿದ್ದರು ರೈತರು. ಅಕ್ಟೋಬರ್‌ 2ನೇ ವಾರ ಎನ್ನುವಷ್ಟರಲ್ಲೇ ಬರೋಬ್ಬರಿ ಶೇ.80-90ರಷ್ಟು ಬಿತ್ತನೆ ಮುಗಿಯುತ್ತಿತ್ತು. ಹಿಂಗಾರಿನಲ್ಲಿ ವಾಡಿಕೆ 75 ಮಿಮೀ. ಆದರೆ ಕಳೆದ 20 ದಿನಗಳಲ್ಲಿ ಸುರಿದಿರುವ ಮಳೆ ಬರೋಬ್ಬರಿ 172 ಮಿಮೀ, ಅಂದರೆ ದುಪ್ಪಟ್ಟುಗಿಂತ ಹೆಚ್ಚು ಮಳೆ ಸುರಿದಿದೆ. ಇದೀಗ ಸುರಿಯುತ್ತಿರುವ ಚಿತ್ತಿ ಮಳೆ ರೈತರ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಹಿಂಗಾರಿನಲ್ಲಿ ಕಡಲೆ, ಜೋಳ, ಗೋದಿ, ಹುರಳೆ, ಅವರೆ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆ ಬೆಳೆಯಲಾಗುತ್ತದೆ. ಇದರಲ್ಲಿ ಕಡಲೆ ಹಾಗೂ ಹುರಳೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಾರೆ. ಆದರೆ ಎಲ್ಲೂ ಬಿತ್ತನೆಯೇ ಆಗಿಲ್ಲ. ಆಗಿದ್ದರೂ ಲೆಕ್ಕ ಹಾಕಲಾರದಷ್ಟು ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹೀಗೆ ಬಿತ್ತನೆಯಾಗಿರುವ ಪ್ರದೇಶದಲ್ಲಿನ ಬೆಳೆಯೂ ಕೂಡ ಮಳೆಗೆ ಕೊಚ್ಚಿಕೊಂಡು ಹೋಗಿದೆ.

ಬಿತ್ತನೆ ಮಾಡಲು ಆಗುತ್ತಿಲ್ಲ:

ಈ ಬಾರಿ 2.01 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯಿಂದ ಹೊಲಗಳಲ್ಲಿ ನೀರು ತುಂಬಿಕೊಂಡಿದೆ. ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಒಂದು ಮಳೆ ನಿಂತರೆ ಮುಂದೆ ನಾಲ್ಕು ದಿನ ನಿರಂತರವಾಗಿ ಸುರಿಯುತ್ತಿದೆ. ಹೀಗಾದರೆ ಬಿತ್ತನೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ರೈತಾಪಿ ವರ್ಗದ್ದು.

ಪ್ರತಿವರ್ಷ ಈ ವೇಳೆಗೆ ಬಹುತೇಕ ಬಿತ್ತನೆ ಮುಗಿದಿರುತ್ತಿತ್ತು. ಆದರೆ ಈ ವರ್ಷ ಬಿತ್ತನೆ ಆಗಿಲ್ಲ. ಬಿತ್ತನೆ ಮಾಡಿದ್ದರೂ ಅದು ಲೆಕ್ಕಕ್ಕೆ ಇಲ್ಲ. ಅಷ್ಟೊಂದು ಕಡಿಮೆ ಪ್ರಮಾಣದಲ್ಲಿ ಆಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಈ ವರ್ಷ ಮುಂಗಾರು ಹಂಗಾಮಿನ ಬೆಳೆಯೂ ರೈತರ ಕೈ ಹಿಡಿಯಲಿಲ್ಲ. ಹಿಂಗಾರಿನ ಪರಿಸ್ಥಿತಿಯೂ ಈ ರೀತಿ ಆಗಿದೆ. ಸರ್ಕಾರ ರೈತರಿಗೆ ನೆರವು ನೀಡಬೇಕು ಎಂಬ ಬೇಡಿಕೆ ರೈತರದ್ದು.

ಪ್ರತಿ ವರ್ಸಾ ಇಷ್ಟೊತ್ತಿಗಾಗಲೇ ಹಿಂಗಾರಿ ಬೆಳೆಗಳನ್ನೆಲ್ಲ ಬಿತ್ತಿ ಮುಗಿಸ್ತಾ ಇದ್ದಿವಿ. ಆದರೆ ಈ ವರ್ಷ ಈ ವರೆಗೂ ಬಿತ್ತನೆ ಮಾಡೋಕೆ ಆಗಿಲ್ಲ. ಹೇಗೆ ಮಾಡಬೇಕು. ತಿಳಿತಾ ಇಲ್ಲ ಎಂದು ರೈತ ಕಲ್ಮೇಶ ಪಾಟೀಲ ಹೇಳಿದರು.

Share this article