ಹೊಸದುರ್ಗದಲ್ಲಿ ಕ್ಲೋರಿನ್‌ ಸೋರಿಕೆ: 50ಕ್ಕೂ ಹೆಚ್ಚು ಜನರು ಆಸ್ವಸ್ಥ

KannadaprabhaNewsNetwork |  
Published : Sep 10, 2024, 01:34 AM IST
ಹೊಸದುರ್ಗದಲ್ಲಿ ನೀರು ಶುದ್ದೀಕರಿಸಲು ಬಳಸಲಾಗುತ್ತಿದ್ದ ಕ್ಲೋರಿನ್‌ ಸೋರಿಕೆಯಿಂದ ಸಾರ್ವಜನಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದು. | Kannada Prabha

ಸಾರಾಂಶ

ನೀರು ಶುದ್ಧೀಕರಣ ಮಾಡಲು ಬಳಸುವ ಕ್ಲೋರಿನ್‌ ಸಿಲಿಂಡರ್‌ ಸೋರಿಕೆಯಾಗಿ ಉಂಟಾದ ವಾಸನೆಯಿಂದ ಸುಮಾರು 50 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ.ಹೊಸದುರ್ಗ ಪಟ್ಟಣಕ್ಕೆ ಕೆಲ್ಲೋಡು ಬಳಿ ವೇದಾವತಿ ನದಿಗೆ ನಿರ್ಮಿಸಲಾಗಿರುವ ಬ್ಯಾರೇಜ್‌ನಿಂದ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತದೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿರುವ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಣಕ್ಕಾಗಿ ದೊಡ್ಡ ಪ್ರಮಾಣದ ಕ್ಲೋರಿನ್‌ ಸಿಲಿಂಡರ್ ಇಡಲಾಗಿದೆ. ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಈ ಸಿಲಿಂಡರ್‌ನಿಂದ ಕ್ಲೋರಿನ್‌ ಸೋರಿಕೆಯಾಗಿ ಆ ಭಾಗದಲ್ಲಿ ಇಡೀ ವಾತಾವರಣವೇ ಕಲುಷಿತ ಗೊಂಡಿದೆ.

ಕನ್ನಡಪ್ರಭವಾರ್ತೆ ಹೊಸದುರ್ಗ

ನೀರು ಶುದ್ಧೀಕರಣ ಮಾಡಲು ಬಳಸುವ ಕ್ಲೋರಿನ್‌ ಸಿಲಿಂಡರ್‌ ಸೋರಿಕೆಯಾಗಿ ಉಂಟಾದ ವಾಸನೆಯಿಂದ ಸುಮಾರು 50 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ.

ಹೊಸದುರ್ಗ ಪಟ್ಟಣಕ್ಕೆ ಕೆಲ್ಲೋಡು ಬಳಿ ವೇದಾವತಿ ನದಿಗೆ ನಿರ್ಮಿಸಲಾಗಿರುವ ಬ್ಯಾರೇಜ್‌ನಿಂದ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತದೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿರುವ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಣಕ್ಕಾಗಿ ದೊಡ್ಡ ಪ್ರಮಾಣದ ಕ್ಲೋರಿನ್‌ ಸಿಲಿಂಡರ್ ಇಡಲಾಗಿದೆ. ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಈ ಸಿಲಿಂಡರ್‌ನಿಂದ ಕ್ಲೋರಿನ್‌ ಸೋರಿಕೆಯಾಗಿ ಆ ಭಾಗದಲ್ಲಿ ಇಡೀ ವಾತಾವರಣವೇ ಕಲುಷಿತ ಗೊಂಡಿದೆ.

ಉಸಿರಾಟದಲ್ಲಿ ಹೆಚ್ಚು ಕ್ಲೋರಿನ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಉಸಿರಾಟದ ತೊಂದರೆಯಾಗಿ ಇರಿಸುಮುರಿಸು ಉಂಟಾಗುತ್ತದೆ. ಕೆಮ್ಮು, ಎದೆ ನೋವು, ಉಸಿರಾಟದ ತೊಂದರೆ ಉಂಟಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕ್ಲೋರಿನ್ ಸೇವಿಸಿದರೆ ಸಾವೂ ಸಂಭವಿಸಬಹುದಾಗಿದ್ದು, ಮಾರುಕಟ್ಟೆ ಮುಂಭಾಗ ಸೇರಿದಂತೆ ಘಟಕದ ಸುತ್ತಮುತ್ತ ಇದ್ದ ಜನರು ಕ್ಲೋರಿನ್‌ ವಾಸನೆಯಿಂದ ತೀವ್ರ ಇರಿಸು ಮುರಿಸಿಗೆ ಉಂಟಾಗಿದ್ದಾರೆ. ಕೆಲವರು ವಾಂತಿ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಕೆಲವರಿಗೆ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥರಾಗಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಜನರು ಗಾಬರಿಗೊಂಡಿದ್ದಾರೆ. ದಿಗಿಲು ಬಿದ್ದಿದ್ದಾರೆ. ಕೂಡಲೇ ಎಲ್ಲರೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ.

ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಶುದ್ಧೀಕರಣ ಘಟಕದ ಕ್ಲೋರಿನ್‌ ಸಿಲಿಂಡರ್‌ ಅತ್ಯಂತ ಹಳೆಯದಾಗಿದ್ದು ಸುಸ್ಥಿಯಲ್ಲಿತ್ತು. ಆದರೆ ಸೋಮವಾರ ಏಕಾಏಕಿ ನೀರು ಶುದ್ಧೀಕರಿಸಲು ಬಳಕೆ ಮಾಡುತ್ತಿದ್ದ ಕ್ಲೋರಿನ್‌ ಸೋರಿಕೆಯಾಗಿದೆ. ಇದರಿಂದ ಘಟಕದ ಬಳಿಯಿದ್ದ ಹತ್ತಾರು ಮಂದಿಗೆ ವಾಂತಿಯಾಗಿದೆ. ಹಾಗಾಗಿ ಜನರು ಗಾಬರಿಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಸೋರಿಕೆಯನ್ನು ನಿಲ್ಲಿಸಲಾಗಿದೆ. ಹೆಚ್ಚಿನ ಆನಾಹುತವೇನು ಆಗಿಲ್ಲ. ಅಲ್ಲದೆ ಆಸ್ಪತ್ರೆಗೆ ದಾಖಲಾಗಿರುವವರು ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸೋರಿಕೆಗೆ ಸಿಬ್ಬಂದಿ ಬೇಜವಬ್ದಾರಿ ಕಾರಣ:

ಅಪಾಯದ ವಸ್ತುಗಳನ್ನು ಕಟ್ಟಡದ ಒಳಗೆ ಇಡಬೇಕಿದ್ದ ಸಿಬ್ಬಂದಿ ಅದನ್ನು ಬಯಲಿನಲ್ಲಿ ಇರಿಸಿದ್ದಾರೆ ಎನ್ನುವ ಸಂಗತಿ ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ. ಹಲವು ದಿನಗಳಿಂದ ಇದನ್ನು ಘಟಕದ ಹೊರಭಾಗದಲ್ಲಿ ಇಡಲಾಗಿದೆ. ಯಾರೋ ಹುಡುಗರು ಅದರ ಪಿನ್‌ ಅನ್ನು ಕಲ್ಲಿನಲ್ಲಿ ಹೊಡೆದಿದ್ದಾರೆ. ಇದರಿಂದ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. ರಾತ್ರಿಯವರೆಗೂ ವಾತಾವರಣದಲ್ಲಿ ಕ್ಲೋರಿನ ವಾಸನೆ ಇದ್ದುದರಿಂದ ಇನ್ನೂ ಪಟ್ಟಣದ ಜನತೆ ಆತಂಕದಲ್ಲಿದ್ದರು. ಆಸ್ಪತ್ರೆಯಲ್ಲಿ ಸಿಬ್ಬಂದಿಯಿಲ್ಲದೆ ಪರದಾಟ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿದ್ದ ಗಣಪತಿಯನ್ನು ವಿಸರ್ಜಿಸಲು ಆಸ್ಪತ್ರೆಯ ಸಿಬ್ಬಂದಿ ತೆರಳಿದ್ದರು. ಆಸ್ಪತ್ರೆಯಲ್ಲಿ ಬೆರಳೆಣಕಿಯಷ್ಟು ಸಿಬ್ಬಂದಿ ಮಾತ್ರ ಇದ್ದರು. ಏಕಾಏಕಿ ಆಸ್ಪತ್ರೆಗೆ ಜನರು ದಾಖಲಾಗುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಅವರನ್ನು ಚಿಕಿತ್ಸೆ ಮಾಡಲು ಪರದಾಡಿದರು. ಅಲ್ಲದೆ ಜನರೂ ಕೂಡ ಗಾಬರಿಯಿಂದ ಚಿಕಿತ್ಸೆಗಾಗಿ ಪರದಾಡಿದ್ದಾರೆ . ಇಲ್ಲಿ ಚಿಕಿತ್ಸೆ ಸಿಗುತ್ತೋ ಇಲ್ಲವೋ ಎಂದು ಖಾಸಗಿ ಆಸ್ಪತ್ರೆಗಳತ್ತವೂ ಮುಖಮಾಡಿದ್ದಾರೆ. ಇನ್ನೂ ಉಸಿರಾಟದ ಸಮಸ್ಯೆ ಕಂಡು ಬಂದವರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇದ್ದರೂ ಅದನ್ನು ಅಳವಡಿಸಲು ವಿಳಂಬವಾಗಿದೆ. ಇದರಿಂದ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿ ವರ್ತನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!