ಜೀವನದ ದಾರಿ ತೋರಿಸುವ ಗುರುಗಳನ್ನು ಆರಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ

KannadaprabhaNewsNetwork |  
Published : Jul 30, 2026, 02:15 AM IST
ಹಾವೇರಿಯ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ದೇಗುಲದ ಮೂರನೇ ವಾರ್ಷಿಕೋತ್ಸವ ಹಾಗೂ ಗುರು ಪೂರ್ಣಿಮಾ ಮಹೋತ್ಸವ ಸಮಾರಂಭದಲ್ಲಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪಾಲ್ಗೊಂಡು ಸಾಯಿಬಾಬಾ ಅವರಿಗೆ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಹಾವೇರಿ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಮೂರನೇ ವಾರ್ಷಿಕೋತ್ಸವ ಮತ್ತು ಗುರು ಪೂರ್ಣಿಮಾ ಮಹೋತ್ಸವ ಸಮಾರಂಭದಲ್ಲಿ ಶಿರಹಟ್ಟಿ ಮತ್ತು ಬಾಲೆಹೊಸೂರಿನ ಭಾವೈಕ್ಯತಾ ಸಂಸ್ಥಾನ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

ಹಾವೇರಿ: ಗುರುಗಳು ಶಿಷ್ಯಂದಿರ ನೋವು ಅಪಹರಿಸಬೇಕು, ಆತನ ಸಂಪತ್ತು ಅಪಹರಿಸಬಾರದು. ನಮ್ಮ ಸಂಪತ್ತಿನ ಮೇಲೆ ಕಣ್ಣು ಹಾಕುವ ಗುರುಗಳನ್ನು ಆರಿಸುವ ಬದಲಿಗೆ ಜೀವನದ ದಾರಿ ತೋರಿಸುವ ಗುರುಗಳನ್ನು ಆರಿಸಬೇಕು ಎಂದು ಶಿರಹಟ್ಟಿ ಮತ್ತು ಬಾಲೆಹೊಸೂರಿನ ಭಾವೈಕ್ಯತಾ ಸಂಸ್ಥಾನ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಮೂರನೇ ವಾರ್ಷಿಕೋತ್ಸವ ಮತ್ತು ಗುರು ಪೂರ್ಣಿಮಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವರ್ಷಕ್ಕೊಮ್ಮೆ ಗುರುಗಳ ದರ್ಶನ ಮಾಡಿದರೆ ಸಾಲದು. ನಿತ್ಯವೂ ಗುರುಗಳ ದರ್ಶನ, ಮಾರ್ಗದರ್ಶನ ಮುಖ್ಯ. ಜಾತಿ ಪ್ರಧಾನವಾದ ಗುರುಗಳಿಗಿಂತ ನೀತಿ ಪ್ರಧಾನವಾದ ಗುರುಗಳನ್ನು ಆರಿಸಿ. ಇಂದಿನ ಇಂಟರ್‌ನೆಟ್ ಕಾಲದಲ್ಲಿ ಮಕ್ಕಳಲ್ಲಿ ವಿದ್ಯೆ ಎಲ್ಲರಿಗೂ ಸಿಗುತ್ತಿದೆ. ಆದರೆ, ಗುಣ, ಸಂಸ್ಕಾರದ ಕೊರತೆ ಎಲ್ಲೆಡೆ ಕಂಡುಬರುತ್ತಿದೆ. ಗುಣ ಇಲ್ಲದಿದ್ದರೆ ಜೀವನ ಸಾರ್ಥಕವಾಗುವುದಿಲ್ಲ. ಹಾಗಾಗಿ, ವಿದ್ಯೆಯ ಜತೆಗೆ ಅಗತ್ಯವಾಗಿ ಗುಣಗಳು, ಸಂಸ್ಕಾರವನ್ನು ಕಲಿಸಿ ಎಂದು ಹೇಳಿದರು.

ಪ್ರಪಂಚದ ಪ್ರತಿಯೊಬ್ಬರಿಗೂ ಗುರು ಅನಿವಾರ್ಯ. ಹಿಂದೆ ಸಮರ್ಥವಾದ ಗುರು ಮತ್ತು ಮುಂದೆ ಗುರಿ ಇದ್ದ ವ್ಯಕ್ತಿ ಜೀವನದಲ್ಲಿ ಯಸಸ್ಸು ಕಾಣುತ್ತಾನೆ. ಗುರುಗಳಲ್ಲಿ ಎರಡು ಪ್ರಕಾರ. ಭೌತಿಕವಾದ ಸಂಪತ್ತು ಕೊಡುವ ಗುರು ಹಾಗೂ ಮಾನಸಿಕ ನೆಮ್ಮದಿ ಕೊಡುವ ಗುರು ಎಂದರು.

`ವಾಣಿಜ್ಯ ರತ್ನ'''' ಪ್ರಶಸ್ತಿಗೆ ಆಯ್ಕೆಯಾದ ಉದ್ಯಮಿ, ದೇಗುಲ ಟ್ರಸ್ಟ್‌ನ ಉಪಾಧ್ಯಕ್ಷ ರಾಜಶೇಖರ ಮಾಗನೂರ ಅವರನ್ನು ಶ್ರೀಗಳು ಸನ್ಮಾನಿಸಿದರು. ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಜಗದೀಶ ಬೆಟಗೇರಿ, ಕಾರ್ಯದರ್ಶಿ ವಿಜಯಕುಮಾರ ಗೊಡಚಿ, ಉಪಾಧ್ಯಕ್ಷ ಕೆ.ಸಿ. ಪಾವಲಿ, ಜಗದೀಶ ಕನವಳ್ಳಿ ಪಾಲ್ಗೊಂಡಿದ್ದರು.ಚೌಡೇಶ್ವರಿ ದೇಗುಲಕ್ಕೆ ಭೂಮಿಪೂಜೆ: ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ದಿಂಗಾಲೇಶ್ವರ ಶ್ರೀಗಳು ಶ್ರೀ ಚೌಡೇಶ್ವರಿ ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಬೆಳಗ್ಗೆಯಿಂದ ಕಾಕಡಾರತಿ, ಕ್ಷೀರಾಭಿಷೇಕ, ಮಹಾಮಂಗಳಾರತಿ, ಸತ್ಯ ನಾರಾಯಣ ಪೂಜೆ, ನವಗ್ರಹ ಪೂಜೆ, ಗಣ ಹೋಮ, ದತ್ತಾತ್ರೇಯ ಹೋಮ, ರುದ್ರ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಸಂಜೆ ಭಜನಾ ಕಾರ್ಯಕ್ರಮ, ಶ್ರೀ ಸಾಯಿಬಾಬಾರ ಪಾಲಿಕೆ ಉತ್ಸವ ಜರುಗಿತು. ಹುಬ್ಬಳ್ಳಿಯ ಜಯಪ್ರಿಯಾ ಆಸ್ಪತ್ರೆ ಹಾಗೂ ದೇಗುಲದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ಥಕ ಬದುಕಿಗೆ ವಚನಗಳ ಸಾರ ದಾರಿದೀಪ
ನಗರಸಭೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ