ಬಸವಾದಿ ಪ್ರಮಥರಲ್ಲಿ ಚೌಡಯ್ಯ ಹೆಸರು ಅಗ್ರಮಾನ್ಯ

KannadaprabhaNewsNetwork |  
Published : Jan 22, 2025, 12:32 AM IST
ಪೋಟೊ- ೨೧ ಎಸ್.ಎಚ್.ಟಿ. ೧ಕೆ- ತಹಸೀಲ್ದಾರ ಅನಿಲ ಬಡಿಗೇರ ನಿಜ ಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಅಂದು ಶರಣರು ಹಾಕಿದ ಸೈದ್ಧಾಂತಿಕ ನೆಲೆ ಇಂದಿಗೂ ಪ್ರಸ್ತುತ. ವಚನಕಾರರ ವಿಚಾರಗಳು ಆದರ್ಶಪ್ರಾಯ

ಶಿರಹಟ್ಟಿ: ಕರ್ನಾಟಕದ ಇತಿಹಾಸದಲ್ಲಿ ೧೨ನೇಯ ಶತಮಾನವು ಅತ್ಯಂತ ಉಜ್ವಲ ಮತ್ತು ಚಿರಸ್ಮರಣೀಯವಾದ ಕಾಲಘಟ್ಟ. ನೂರಾರು ಶರಣರು ತಮ್ಮ ಜ್ಞಾನ ಭಕ್ತಿ, ಮುಕ್ತಿ, ಕಾಯಕ, ದಾಸೋಹ ಸಾಮಾಜಿಕ ಚಿಂತನೆ, ನಡೆ-ನುಡಿಗಳಿಂದ ಹೊಸ ಸಮಾಜ ನಿರ್ಮಿಸಲು ಪ್ರಯತ್ನಿಸಿದರು ಎಂದು ತಹಸೀಲ್ದಾರ್‌ ಅನಿಲ ಬಡಿಗೇರ ಹೇಳಿದರು.

ಮಂಗಳವಾರ ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಅಂದು ಶರಣರು ಹಾಕಿದ ಸೈದ್ಧಾಂತಿಕ ನೆಲೆ ಇಂದಿಗೂ ಪ್ರಸ್ತುತ. ವಚನಕಾರರ ವಿಚಾರಗಳು ಆದರ್ಶಪ್ರಾಯ. ಅವರ ಬದುಕು ಮಾದರಿ. ಮನುಷ್ಯನನ್ನು ಮನುಷ್ಯನಂತೆ ಕಾಣಲು ಕಲಿಸಿದ ಅತಿ ಮಹತ್ವದ ಕಾಲಘಟ್ಟವದು ಎಂದರು.

ಮಹಾಮನೆಯ ಮಹಾನುಭಾವಿಯಾದ ಭಕ್ತ ಭಂಡಾರಿ ಬಸವಣ್ಣನ ಸತ್ಸಂಗದಲ್ಲಿ ಬೆಳೆದು, ಶ್ರೇಷ್ಠ ತತ್ವಜ್ಞಾನಿಯಾಗಿ ಹೊಳೆದು, ಮೊಹೋನ್ನತ ಸ್ಥಾನ ಪಡೆದು ಆಧ್ಯಾತ್ಮಿಕ ಗಿರಿ ಶೃಂಗವನೇರಿ ಶರಣ ಧರ್ಮದ ಕೀರ್ತಿ ಪತಾಕೆ ಎತ್ತಿ ಹಿಡಿದ ಪುಣ್ಯಾತ್ಮನಾಗಿದ್ದಾನೆ. ಸಾಮಾನ್ಯವಾಗಿ ಶರಣರೆಲ್ಲರೂ ಅವರವರ ಇಷ್ಟ ದೈವದ ಅಂಕಿತ ಇಟ್ಟುಕೊಂಡು ವಚನ ರಚನೆಗೈಯ್ದರೆ ಆ ಸಂಪ್ರದಾಯ ಧಿಕ್ಕರಿಸಿ, ತನ್ನ ಹೆಸರನ್ನೇ ಅಂಕಿತಗೊಳಿಸಿ ವಚನಗಳ ರಚನೆಗೈದ ದಿಟ್ಟ ವಚನಕಾರರು ಅಂಬಿಗರ ಚೌಡಯ್ಯ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಅತ್ಯಂತ ಸ್ಫೂರ್ತಿದಾಯಕ ಮತ್ತು ಕ್ರಾಂತಿಕಾರಿ ವ್ಯಕ್ತಿಗಳಲ್ಲೊಬ್ಬರಾದ ಅಂಬಿಗರ ಚೌಡಯ್ಯನವರು ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಇದ್ದುಕೊಂಡೆ ಎಲ್ಲ ದೋಷ ಎತ್ತಿ ಹೇಳಿ ವಿಡಂಬಿಸಿದವರು. ಪೂಜೆ, ದೇವರು, ಧರ್ಮ, ಸಾಮಾಜಿಕ ಬದುಕು ಇವೆಲ್ಲವುಗಳಲ್ಲೂ ಶತಮಾನಗಳಿಂದ ಬಂದ ಸಾಂಪ್ರದಾಯಿಕ ಆಚರಣೆಗಳೇ ತುಂಬಿದ್ದವು.

ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಯಜಮಾನ ಸಂಸ್ಕೃತಿಯ ಹಿಡಿತದಲ್ಲಿ ಸಿಕ್ಕು ಗೊಡ್ಡು ನಂಬಿಕೆ ತಲೆಯಲ್ಲಿ ತುಂಬಿಕೊಂಡು ಸಮಾಜ ನರಳುತ್ತಿರುವಾಗ ವಚನಕಾರರು ಆಗಮಿಸಿ ಸಮಾಜದ ಪ್ರತಿ ಭಾಗ ಅವರು ವಾಸ್ತವ ದೃಷ್ಟಿಯಿಂದ ನೋಡುವುದರ ಮೂಲಕ ಸಾಮಾಜಿಕ ಕೊಳಕನ್ನು ಕಿತ್ತೊಗೆಯಲು ಪ್ರಯತ್ನಿಸಿದರು ಎಂದು ತಿಳಿಸಿದರು.

ದಬ್ಬಾಳಿಕೆ ವ್ಯವಸ್ಥೆಗಳ ವಿರುದ್ಧ ಜನರು ಮೇಲೇಳಲು ಪ್ರೇರೇಪಿಸಿದರು. ಇವರ ವಚನಗಳು ಕೇವಲ ಸಾಹಿತ್ಯದ ಅಭಿವ್ಯಕ್ತಿಯ ಸಾಧನವಾಗಿರಲಿಲ್ಲ. ಅವು ಸಾಮಾಜಿಕ ಬದಲಾವಣೆಯ ಪ್ರಣಾಳಿಕೆಯಾಗಿದ್ದವು. ಜಾತಿ ವ್ಯವಸ್ಥೆ ತೊಲಗಿಸಲು ಶ್ರಮಿಸಿದರು ಎಂದರು.

ಸಮಾಜದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ, ಪರಶುರಾಮ ಹುಬ್ಬಳ್ಳಿ, ಪ್ರವೀಣ ಹುಬ್ಬಳ್ಳಿ, ಪವನ ಹುಬ್ಬಳ್ಳಿ, ಶಿವಾನಂದ ಬಾರಕೇರ, ಯಲ್ಲಪ್ಪ ಹುಬ್ಬಳ್ಳಿ, ಶಂಕರ ಹುಬ್ಬಳ್ಳಿ, ರಾಜು ಸುಣಗಾರ, ಜಗದೀಶ ಹುಬ್ಬಳ್ಳಿ, ಚಂದ್ರು ಹುಬ್ಬಳ್ಳಿ, ವಿನಯಕ ಹುಬ್ಬಳ್ಳಿ ಇಲಾಖೆಯ ವಿನೋದ ಪಾಟೀಲ ಸೇರಿದಂತೆ ಅನೇಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ