ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ ‘ಪಾಯಿಂಟ್ ಆಫ್ ಕಾಲ್’ ಸ್ಥಾನಮಾನ ನೀಡುವ ಅಗತ್ಯತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.ಲೋಕಸಭೆಯಲ್ಲಿ ನಿಯಮ 377ರಡಿ ವಿಷಯದ ಬಗ್ಗೆ ಧ್ವನಿಯೆತ್ತಿರುವ ಅವರು, ಮಂಗಳೂರು ಏರ್‌ಪೋರ್ಟ್ 2024-25ರ ಅವಧಿಯಲ್ಲಿ 7.15 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ ಒಟ್ಟು ಸುಮಾರು 23.4 ಲಕ್ಷ ಮಂದಿಯ ಪ್ರಯಾಣವನ್ನು ನಿರ್ವಹಿಸಿದ್ದು, ಆ ಮೂಲಕ ಸುಮಾರು 16,800ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಸಿದೆ. ಇದರೊಂದಿಗೆ ವಾರ್ಷಿಕವಾಗಿ ಶೇ.15ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ವಿಮಾನ ನಿಲ್ದಾಣಕ್ಕೆ ಪಿಒಸಿ ಸ್ಥಾನಮಾನ ನೀಡುವುದರಿಂದ ಈ ಭಾಗದ ಜನರಿಗೆ ನೇರ ಅಂತಾರಾಷ್ಟ್ರೀಯ ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ ವಿಮಾನಯಾನ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ವಿದೇಶದಲ್ಲಿ ದುಡಿಯುವ ವರ್ಗಕ್ಕೆ ಹಾಗೂ ಅವರ ಕುಟುಂಬಗಳ ಸುಗಮ ಪ್ರಯಾಣ ಸಾಧ್ಯವಾಗುತ್ತದೆ. ಈ ರೀತಿಯ ವಿಮಾನಯಾನ ಸಂಪರ್ಕವು ಸಹಜವಾಗಿಯೇ ಇಲ್ಲಿನ ವ್ಯಾಪಾರ ಮತ್ತು ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಇದು ಸಾಗರೋತ್ತರ ಉತ್ಪನ್ನಗಳ ರಫ್ತು, ಅಡಿಕೆ, ಗೋಡಂಬಿ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ನಂತಹ ಪ್ರಾದೇಶಿಕ ಉದ್ಯಮಗಳಿಗೂ ಬೆಂಬಲ-ಉತ್ತೇಜನ ನೀಡುತ್ತದೆ. ಜೊತೆಗೆ ಮಂಗಳೂರು ವಿಶೇಷ ಆರ್ಥಿಕ ವಲಯದ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಕ್ಯಾ. ಚೌಟ ಸದನಕ್ಕೆ ಮನವರಿಕೆ ಮಾಡಿದರು.