ಧಾರವಾಡದಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ!

KannadaprabhaNewsNetwork | Published : Dec 23, 2024 1:04 AM

ಸಾರಾಂಶ

ಧಾರವಾಡದಲ್ಲಿ ಕ್ರಿಸ್‌ಮಸ್‌ ಹಬ್ಬದ ವಿಶೇಷಕ್ಕೆ ಕಾರಣವಿದೆ. ಈ ಊರಿನಲ್ಲಿ 7000ಕ್ಕೂ ಹೆಚ್ಚು ಕ್ರೈಸ್ತ ಸಮುದಾಯದವರಿದ್ದಾರೆ. 188 ವರ್ಷಗಳ ಇತಿಹಾಸ ಹೊಂದಿರುವ ಹೆಬಿಕ್‌ ಸೇರಿದಂತೆ ಹಲವು ಪ್ರಮುಖ ಚರ್ಚ್‌ಗಳು ಸಹ ಇವೆ.

ಬಸವರಾಜ ಹಿರೇಮಠ

ಧಾರವಾಡ:

ಕ್ರೈಸ್ತರ ಆರಾಧ್ಯದೈವ ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಕ್ರಿಸ್‌ಮಸ್ ಹಬ್ಬದಾಚರಣೆಗೆ ಸಜ್ಜಾಗಿದ್ದು, ಕ್ರಿಸ್‌ಮಸ್ ಸಂಭ್ರಮ ಧಾರವಾಡದಲ್ಲಿ ಕಳೆಗಟ್ಟಿದೆ.

ಡಿ. 1ರಂದು ಕ್ರಿಸ್ತನ ಆಗಮನದ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳು ಬಂತೆಂದರೆ ಧಾರವಾಡದಲ್ಲಿ ವಿಶೇಷವಾಗಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಶುರುವಾಗುತ್ತದೆ. ಧಾರವಾಡದಲ್ಲಿ ಪ್ರೊಟೆಸ್ಟೆಂಟ್‌ ಹಾಗೂ ಕ್ಯಾಥೋಲಿಕ್‌ ಎರಡು ಜನಾಂಗಗಳ ಸದಸ್ಯರು ಇದ್ದಾರೆ. ಒಂದು ತಿಂಗಳ ಕಾಲ ನಗರದ ವಿವಿಧ ಚರ್ಚ್‌ಗಳಲ್ಲಿ ಪ್ರಾರ್ಥನೆ, ಹಾಡು, ಏಸುವಿನ ಪ್ರಾರ್ಥನೆ ನಡೆಯುತ್ತದೆ.

ಇಲ್ಲಿಯ ವಿಶೇಷತೆ:

ಧಾರವಾಡದಲ್ಲಿ ಕ್ರಿಸ್‌ಮಸ್‌ ಹಬ್ಬದ ವಿಶೇಷಕ್ಕೆ ಕಾರಣವಿದೆ. ಈ ಊರಿನಲ್ಲಿ 7000ಕ್ಕೂ ಹೆಚ್ಚು ಕ್ರೈಸ್ತ ಸಮುದಾಯದವರಿದ್ದಾರೆ. 188 ವರ್ಷಗಳ ಇತಿಹಾಸ ಹೊಂದಿರುವ ಹೆಬಿಕ್‌ ಸೇರಿದಂತೆ ಹಲವು ಪ್ರಮುಖ ಚರ್ಚ್‌ಗಳು ಸಹ ಇವೆ. ಧರ್ಮ, ಶಿಕ್ಷಣ, ಸಾಹಿತ್ಯದ ಪ್ರಸಾರ ಹಾಗೂ ವೈದ್ಯಕೀಯ ಸೇವೆಯ ಹಿನ್ನೆಲೆಯಲ್ಲಿ 188 ವರ್ಷಗಳ ಹಿಂದೆ ಧಾರವಾಡಕ್ಕೆ ಬಂದ ಬಾಸೆಲ್‌ ಮಿಷನರಿಗಳ ಮುಂದಿನ ಪೀಳಿಗೆ ಇಲ್ಲಿಯೆ ನೆಲೆಯೂರಿರುವ ಕಾರಣ ಧಾರವಾಡದಲ್ಲಿ ಹಬ್ಬದಾಚರಣೆ ಜೋರಾಗಿಯೇ ಇರುತ್ತದೆ.

ಹಬ್ಬದಲ್ಲೇನಿದೆ?:

ಕ್ರಿಸ್ತನು ದನದ ಕೊಟ್ಟಿಗೆಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಹಬ್ಬದ ನಿಮಿತ್ತ ಪ್ರತಿ ಕ್ರೈಸ್ತರ ಮನೆಗಳಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತ ಜನನದ ಗೊಂಬೆಗಳಿಡುವುದು, ಕ್ರಿಸ್‌ಮಸ್‌ ವೃಕ್ಷ ಇಟ್ಟು ಅಲಂಕರಿಸುವುದು, ವಿವಿಧ ಮರಗಳ ಎಲೆಗಳ ತೋರಣ ಕಟ್ಟುವುದು, ಹಬ್ಬದ ಅಂಗವಾಗಿ ತಯಾರಿಸಿದ ವಿಶಿಷ್ಟ ತಿಂಡಿ ಹಾಗೂ ಉಡುಗೊರೆ ಹಂಚುವುದು ಇಲ್ಲಿಯ ಸಂಪ್ರದಾಯ. ಸಾಂತಾ ಕ್ಲಾಸ್, ಉಡುಗೊರೆ ಕೊಡುವುದು ಮತ್ತು ಪಡೆಯುವುದು ಹಬ್ಬದ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆ ತಂದುಕೊಡಲು ಸಾಂತಾ ಕ್ಲಾಸ್ ಬರುತ್ತಾನೆ ಎಂಬುದು ಕ್ರೈಸ್ತರ ನಂಬಿಕೆ ಎಂದು ಕರ್ನಾಟಕ ಉತ್ತರ ಸಭಾಪ್ರಾಂತ ಕಾರ್ಯದರ್ಶಿ ವಿಲ್ಸನ್ ಮೈಲಿ ''''ಕನ್ನಡಪ್ರಭ''''ಕ್ಕೆ ಮಾಹಿತಿ ನೀಡಿದರು.

ಕ್ರಿಸ್‌ಮಸ್‌ ಸಮಯದಲ್ಲಿ ಸಮೂಹ ಗೀತೆ ಹಾಡುವ ಪದ್ಧತಿ ಹಲವು ವರ್ಷಗಳಿಂದಲೂ ಇದೆ. ಹಬ್ಬದ ಆಚರಣೆಯ ಕುರಿತಾಗಿ ಹಾಡುವುದು ಮತ್ತು ನೃತ್ಯಗಳ ಮೂಲಕ ದೇವರನ್ನು ಕೊಂಡಾಡುವ, ಸ್ತುತಿಸುವ ಮೂಲಕ ಸಂಪ್ರದಾಯ ಈ ಬಾರಿಯೂ ಮುಂದುವರಿಯಲಿದೆ. ಈ ಹಬ್ಬದಲ್ಲಿ ಮೇಣದ ಬತ್ತಿ ತನ್ನದೇ ಆದ ಮಹತ್ವ ಪಡೆದಿದೆ. ಸಾಂಪ್ರದಾಯಿಕ ಕ್ರೈಸ್ತ ಚರ್ಚ್‌ಗಳಲ್ಲಿ ಕ್ಯಾಂಡಲ್ ಮಾಸ್ (ವಿಶೇಷ ಉತ್ಸವ) ಆರಾಧನೆ ಹಬ್ಬದ ಮೆರಗನ್ನು ನೀಡುತ್ತದೆ ಎಂದರು.

ಡಿ. 1ರಿಂದ ಕ್ರೈಸ್ತನ ಆಗಮನವಾಗಿದ್ದು ಹಬ್ಬ ಶುರುವಾಗಿದೆ. ಡಿ. 24ರಂದು ಮಕ್ಕಳ ಕ್ರಿಸ್‌ಮಸ್‌ ನಡೆಯಲಿದ್ದು, 25ರಂದು ಕ್ರಿಸ್‌ಮಸ್‌ ನಿಮಿತ್ತ ವಿಶ್ವಶಾಂತಿಗೋಸ್ಕರ ಸಾಮೂಹಿಕ ಪ್ರಾರ್ಥನೆ ಇರಲಿದೆ. ಉತ್ತರ ಸಭಾ ಪ್ರಾಂತದ ಬಿಷೋಪ್ ರೆ. ಮಾರ್ಟಿನ್‌ ಬೋರ್ಗಾಯಿ ಭಾಗವಹಿಸುತ್ತಾರೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸಿಹಿ ವಿತರಣೆ ನಡೆಯಲಿದೆ ಎಂದು ಹೆಬಿಕ್‌ ಚರ್ಚ್‌ ಸಭಾಪಾಲಕ ಸ್ಯಾಮುವೇಲ್ ಕ್ಯಾಲ್ವೀನ್ ಹೇಳಿದರು.ಅರ್ಧ ಸ್ಮಾರಕ ನಿರ್ಮಾಣ:

ಜರ್ಮನ್‌ನ ಬಾಸೆಲ್‌ ಮಿಷನರಿಗಳು 1836ರ ಸಮಯದಲ್ಲಿ ಧಾರವಾಡಕ್ಕೆ ಬಂದು ಇಲ್ಲಿಯ ಶಿಕ್ಷಣ, ಧರ್ಮ, ಆರೋಗ್ಯ ಸೇವೆ ಒದಗಿಸುವ ಮೂಲಕ ಇಲ್ಲಿಯೇ ತಮ್ಮ ಅಸ್ತಿತ್ವ ಸ್ಥಾಪಿಸಿದರು. ಈ ಪೈಕಿ ಪ್ರಮುಖ ಮಿಷನರಿಗಳಾದ ರೆ. ಹರ್ಮನ್‌ ರಿಷ್‌, ರೆ. ಫ್ರೆಡ್ರಿಕ್‌ ಕ್ರೌಸ್‌, ಕ್ರಿಸ್ತಿಯಾನಾ ಕ್ರೌಸ್‌, ಜೇಮ್ಸ್‌ ಹೆಂಡ್ರಿಕ್‌, ಫ್ರೀಡಾ ವೋಗ್ಟ, ರೆ. ಸೌಟರ್‌, ರೆ.ಓ. ಕೌಫಮನ್‌ ಸೇರಿದಂತೆ 8ಕ್ಕೂ ಹೆಚ್ಚು ಮಿಷನರಿಗಳ ಸ್ಮಾರಕ ಹೆಬಿಕ್‌ ಚರ್ಚ್‌ ಹಿಂಭಾಗದಲ್ಲಿ ನಿರ್ಮಿಸಲಾಗಿದೆ. ಈ ಪೈಕಿ ಜೇಮ್ಸ್‌ ಹೆಂಡ್ರಿಕ್‌ ಅವರು 28ನೇ ವಯಸ್ಸಿನಲ್ಲಿ ಅಕಾಲಿಕ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಸ್ಮಾರಕವನ್ನು ಅರ್ಧ ಮಾತ್ರ ನಿರ್ಮಿಸಿದ್ದು ವಿಶೇಷ. ಈಗಲೂ ಜರ್ಮನ್‌ನ ಕ್ರೈಸ್ತ ಮಿಷನರಿಗಳು ಧಾರವಾಡ ಬಾಸೆಲ್‌ ಮಿಶನ್‌ ಸಂಸ್ಥೆ ಜತೆಗೆ ಸಾಂಸ್ಕೃತಿಕ ಸಂಬಂಧ ಇಟ್ಟುಕೊಂಡಿದ್ದು ವರ್ಷಕ್ಕೆ ಒಂದು ಬಾರಿ ಧಾರವಾಡಕ್ಕೆ ಭೇಟಿ ನೀಡುತ್ತಾರೆ.

Share this article