ಬೆಲೆ ಕುಸಿತದ ಮಧ್ಯೆಯೂ ಹುಬ್ಬಳ್ಳಿಯಲ್ಲಿ ಸೇವಂತಿಗೆ ಹೂವಿನ ಬೆಲೆ ಚೇತರಿಕೆ

KannadaprabhaNewsNetwork | Published : Jun 25, 2025 12:32 AMUpdated   : Jun 25 2025, 12:33 AM IST
ಪೋಟೋ ಇದೆ. | Kannada Prabha

ಸಾರಾಂಶ

ಸತತ ಬೆಲೆ ಕುಸಿತದ ಮಧ್ಯೆಯೂ ಎರಡ್ಮೂರು ದಿನಗಳಿಂದ ಇಲ್ಲಿಯ ಎಪಿಎಂಸಿಯಲ್ಲಿರುವ ಮಾರುಕಟ್ಟೆಯಲ್ಲಿ ವಿವಿಧ ಹೂವುಗಳ ಬೆಲೆ ಚೇತರಿಕೆ ಕಂಡಿದ್ದು, ಪುಷ್ಪ ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ: ಸತತ ಬೆಲೆ ಕುಸಿತದ ಮಧ್ಯೆಯೂ ಎರಡ್ಮೂರು ದಿನಗಳಿಂದ ಇಲ್ಲಿಯ ಎಪಿಎಂಸಿಯಲ್ಲಿರುವ ಮಾರುಕಟ್ಟೆಯಲ್ಲಿ ವಿವಿಧ ಹೂವುಗಳ ಬೆಲೆ ಚೇತರಿಕೆ ಕಂಡಿದ್ದು, ಪುಷ್ಪ ಕೃಷಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಎರಡ್ಮೂರು ದಿನಗಳ ಹಿಂದೆ 10 ಕಿಲೋ ಸೇವಂತಿಗೆ ಹೂವು ಬರೀ ₹ 200ಗೆ ಮಾರಾಟವಾಗಿದ್ದು, ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಉತ್ತಮ ದರ ಸಿಕ್ಕಿದ್ದು, ಅದೇ 10 ಕಿಲೋ ಹೂವು ₹ 1200ರಿಂದ ₹1600 ವರೆಗೂ ಮಾರಾಟವಾಗಿದೆ. ಹಳದಿ ಹೂವು ₹2 ಸಾವಿರ ದಾಟಿ ಮಾರಾಟವಾಗಿದ್ದು, ಬೆಳೆಗಾರರಿಗೆ ಉತ್ತಮ ದರ ದೊರೆತಿದೆ.

ಮುಂಗಾರಿ ಆರಂಭದಲ್ಲೇ ಈ ಬಾರಿ ಮಳೆ ಹೆಚ್ಚಾಗಿ ಸುರಿದಿದ್ದು, ಜೂನ್‌ 2ನೇ ವಾರದಲ್ಲಿ ಸುರಿದ ಮೃಗಶಿರಾ ಮಳೆ ಪುಷ್ಪ ಕೃಷಿಗೆ ದೊಡ್ಡ ಪೆಟ್ಟು ನೀಡಿದೆ. ಜತೆ ಜತೆಗೆ ಮಳೆಯಿಂದಾಗಿ ಇಳುವರಿ ಸಹ ಹೆಚ್ಚಾಗಿದ್ದು, ಇಲ್ಲಿಯ ಎಪಿಎಂಸಿಯಲ್ಲಿರುವ ಹೂವಿನ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಸೇವಂತಿಗೆ ಹೂವು ಆಗಮಿಸುತ್ತಿದೆ.

ಸದ್ಯ ಪುಷ್ಪ ಕೃಷಿಯಲ್ಲೇ ಸೇವಂತಿಗೆ ಹಂಗಾಮು ಭರ್ಜರಿಯಾಗಿ ನಡೆಯುತ್ತಿದ್ದು, ಗದಗ ತಾಲೂಕಿನ ಲಕ್ಕುಂಡಿ, ಕಣವಿ ಹೊಸೂರು, ಕದಾಂಪುರ, ಪಾಪನಾಶಿಯಿಂದಲೂ ಇಲ್ಲಿಗೆ ರೈತರು ಸೇವಂತಿಗೆ ಹೂವು ಮಾರಾಟಕ್ಕೆ ತರುತ್ತಾರೆ. ಮುಂಡರಗಿ ತಾಲೂಕಿನ ಹಳ್ಳಿಗಳಿಂದಲೂ ಇಲ್ಲಿಗೆ ಬೆಳ್ಳಂಬೆಳಗ್ಗೆ ಹೂವು ಬರುತ್ತದೆ.

ಹೀಗೆ ಗದುಗಿನ ಒಂದೊಂದು ಊರಿನಿಂದಲೂ ಭಾರೀ ಪ್ರಮಾಣದಲ್ಲಿ ಹೂವು ಬರುತ್ತಿದ್ದು, ಗ್ರಾಹಕರ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂವು ಬರುತ್ತಿರುವುದರಿಂದ ಸಹಜವಾಗಿ ಬಂದ ಹೂವು ವಿಲೇವಾರಿ ಆಗುತ್ತಿಲ್ಲ. ಹೀಗೆ ಬಂದ ಹೂವು ನಾಳೆ ಇಟ್ಟು ಮಾರಿದರಾಯಿತು ಎನ್ನುವಂತೆಯೂ ಇಲ್ಲ. ನಾಳೆಯೂ ಮತ್ತೆ ಇಷ್ಟೇ ಪ್ರಮಾಣದ ಹೂವು ತೋಟದಲ್ಲಿ ಅರಳಿ ಸಿದ್ಧವಾಗಿರುತ್ತದೆ. ಹೀಗಾಗಿ ಕಳೆದ ಹಲವು ದಿನಗಳಿಂದ ಹೂವಿನ ಬೆಲೆ ತೀವ್ರ ಕುಸಿತವಾಗಿದ್ದು, ಮಳೆ ಹೊಡೆತದ ಜತೆ ಜತೆಗೆ ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಕೈಸುಟ್ಟುಕೊಂಡಿದ್ದಾರೆ.

ಮಂಗಳವಾರ ಬೆಂಗಳೂರಿನ ಹಳದಿ ಸೇವಂತಿಗೆ ಕಿಲೋಗೆ ₹ 150ರಿಂದ ₹250, ಸ್ಥಳೀಯ ಸೇವಂತಿ ₹ 150ರಿಂದ ₹200, ಚೆಂಡು ಹೂವು ₹ 30ರಿಂದ ₹70, ಬಟನ್‌ ಹೂವು ₹ 100ರಿಂದ ₹150, 250 ಗ್ರಾಂ ತೂಕದ ಮಲ್ಲಿಗೆ ಗುಚ್ಛ ₹ 50ರಿಂದ ₹120ಗೆ ಮಾರಾಟವಾಗಿದೆ.

ಗ್ರಾಹಕರ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಸೇವಂತಿಗೆ ಹೂವು ಬರುತ್ತಿದೆ. ಹೀಗೆ ಬಂದ ಹೂವು ಕೇಳಲು ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಇರುವುದಿಲ್ಲ. ಮೇಲಾಗಿ ಬೆಂಗಳೂರಿನಿಂದ ಇಲ್ಲಿಗೆ ಹೂವು ಬಂದರೆ ಬೆಲೆ ಏರುವುದಿಲ್ಲ. ಹೀಗಾಗಿ ಕಳೆದ ಹಲವು ದಿನಗಳಿಂದ ಬೆಲೆ ಏರಿಕೆಯಾಗಿರಲಿಲ್ಲ ಹುಬ್ಬಳ್ಳಿ ಹೂವಿನ ಮಾರುಕಟ್ಟೆ ವ್ಯಾಪಾರಿ ಧನಂಜಯ ಲದವಾ ಹೇಳಿದರು.

ಗದಗ ತಾಲೂಕಿನಿಂದ ನಿತ್ಯ ಬೆಳಗಿನ ಜಾವದಲ್ಲೇ ಎದ್ದು 60ರಿಂದ 70 ಕಿಮೀ ಕ್ರಮಿಸಿ ಹುಬ್ಬಳ್ಳಿ ಹೂವಿನ ಮಾರುಕಟ್ಟೆಗೆ ಹೂವು ತರುತ್ತೇವೆ. ಆದರೆ, 8ರಿಂದ 10 ಕಿಲೋ ಸೇವಂತಿ ಹೂವು ತುಂಬಿದ ಟ್ರೇ ಮೂರ್ನಾಲ್ಕು ದಿನಗಳ ಕೆಳಗೆ ಬರೀ 200 ರು.ಗೆ ಮಾರಾಟವಾಗಿದೆ. ಇಲ್ಲಿಗೆ ಬಂದ ಖರ್ಚು ಸಹ ಆಗಿಲ್ಲ. ಮಳೆ ಸಹ ವಿಪರೀತ ಆಗಿದ್ದು, ತೀವ್ರ ನಷ್ಟವಾಗಿದೆ. ಎರಡು ದಿನಗಳಿಂದ ಹೂವಿಗೆ ಸಮಾಧಾನಕರ ದರ ಸಿಗುತ್ತಿದೆ ಎಂದು ಗದಗ ತಾಲೂಕಿನ ಪಾಪನಾಶಿಯ ರೈತ ಈಶಪ್ಪ ಶಿವಪ್ಪ ವಿರಜನವರ ಹೇಳಿದರು.

PREV