ಸಿನಿಮಾ ಜಾತಿ, ಧರ್ಮಗಳಿಂದ ಮುಕ್ತವಾಗಲಿ: ಸಚಿವ ಮಧು

KannadaprabhaNewsNetwork |  
Published : Sep 25, 2025, 01:00 AM IST
ಶಿವಮೊಗ್ಗ ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ, ಶಿವಮೊಗ್ಗ ಚಿತ್ರಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ|| ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ದಸರಾ ಚಲನ ಚಿತ್ರೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ  ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ಹರಡಿಕೊಂಡಿದೆ. ಇಂತಹ ಕಳಂಕಗಳಿಂದ ಚಿತ್ರರಂಗ ಹೊರಬಂದು ಮನೋರಂಜನೆಯ ಜತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ಹರಡಿಕೊಂಡಿದೆ. ಇಂತಹ ಕಳಂಕಗಳಿಂದ ಚಿತ್ರರಂಗ ಹೊರಬಂದು ಮನೋರಂಜನೆಯ ಜತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಶಿವಮೊಗ್ಗ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ, ಶಿವಮೊಗ್ಗ ಚಿತ್ರಸಮಾಜ ಜಂಟಿಯಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ದಸರಾ ಚಿತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಚಿತ್ರರಂಗದಲ್ಲಿ ಇಂದು ಸಾಕಷ್ಟು ಸಮಸ್ಯೆ-ಸವಾಲುಗಳ ನಡುವೆಯೂ ಹಲವು ತಜ್ಞರು, ಪರಿಣಿತರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದರ ಕಾರಣದಿಂದಾಗಿ ರಾಜ್ಯದಲ್ಲಿ ಚಿತ್ರರಂಗ, ಚಿತ್ರಮಂದಿರಗಳು ಜೀವಂತವಾಗಿವೆ. ಇಲ್ಲದಿದ್ದಲ್ಲಿ ಪಳೆಯುಳಿಕೆಗಳಾಗಿ ನೋಡಬೇಕಾಗಿತ್ತು ಎಂದರು.

ರಾಜ್ಯದಲ್ಲಿನ ಚಲನಶೀಲ ಚಿತ್ರರಂಗ ಮತ್ತು ತಂತ್ರಜ್ಞರಿಂದಾಗಿ ಅತ್ಯಾಧುನಿಕ ತಂತ್ರಜ್ಞಾನಾಧಾರಿತವಾದ ಯಂತ್ರೋಪಕರಣಗಳು ಬಳಕೆಯಾಗುತ್ತಿವೆ. ಈ ಮೊದಲು ರಾಜ್ಯದ ಚಲನಚಿತ್ರದ ನಿರ್ಮಾಪಕರು ತಮ್ಮ ಅಗತ್ಯಗಳಿಗಾಗಿ ಮದ್ರಾಸ್ ಹೋಗಬೇಕಾಗಿತ್ತು ಎಂದ ಅವರು, ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದ ಆಕಾಶ್ ಆಡಿಯೋ ಸ್ಥಾಪಿಸಿದ್ದ ಕ್ಷಣಗಳನ್ನು ನೆನಪಿಸಿಕೊಂಡರು.

ಪ್ರತಿ ವ್ಯಕ್ತಿಯೂ ತಾನು ತನ್ನ ಕಾರ್ಯಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮಾಡುವ ಕಾರ್ಯದಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾನೆ ಎಂಬುದಕ್ಕೆ ನಟರೇ ಸಾಕ್ಷಿ. ಶಿವಮೊಗ್ಗ ಜಿಲ್ಲೆಯು ಕಲೆ, ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕವಿ-ಕಲಾವಿದರನ್ನು ಉಳಿಸಿ-ಬೆಳೆಸುವ, ಅನುಸರಿಸುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದರು.

ದೇವಾಲಯಗಳಲ್ಲಿನ ಗಂಟೆ ಸದ್ದಿಗಿಂತ ಶಾಲೆಗಳಲ್ಲಿ ಮೊಳಗುವ ಗಂಟೆ ಸದ್ದು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುತ್ತದೆ. ಶಿಕ್ಷಣವು ವಿದ್ಯಾರ್ಥಿಗಳು ಸಾಮಾಜಿಕವಾಗಿ ಸ್ಥಾನಮಾನ ಹೊಂದಲು ಸಹಕಾರಿಯಾಗಿದೆ ಎಂದು ಹೇಳಿದರು.

ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, ರಾಜ್ಯ ಸರ್ಕಾರದ 50 ಲಕ್ಷ ರು. ಆರ್ಥಿಕ ನೆರವಿನೊಂದಿಗೆ ಸುಮಾರು 2.50 ಕೋಟಿ ರು. ವೆಚ್ಚದಲ್ಲಿ ಶಿವಮೊಗ್ಗ ದಸರಾವನ್ನು ಅತ್ಯಂತ ಸಂಭ್ರಮ-ಸಡಗರಗಳಿಂದ ಆಚರಿಸಲಾಗುತ್ತಿದೆ ಎಂದರು.

ನಟ ಶರಣ್, ನಟಿ ಕಾರುಣ್ಯರಾಮ್ ಉಪಸ್ಥಿತರಿದ್ದು, ಮಾತನಾಡಿದರು. ಸೂಡಾ ಅಧ್ಯಕ್ಷ ಎಸ್.ಎಚ್.ಸುಂದರೇಶ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಮಾಜಿ ನಗರಪಾಲಿಕೆ ಸದಸ್ಯರಾದ ರೇಖಾ ರಂಗನಾಥ್, ನಾಗರಾಜ ಕಂಕಾರಿ, ವಿಶ್ವಾಸ್, ಕಲಾವಿದರಾದ ಬಿಂಬಶ್ರೀ, ಫಾಲಾಕ್ಷಿ, ಕೃಪಾಕರ, ಅಚ್ಯತ ನಾರಾಯಣ ಮತ್ತಿತರರು ಹಾಜರಿದ್ದರು.

ಉದ್ಘಾಟನಾ ಕಾರ್ಯಕ್ರಮದ ನಂತರ ರಸಗ್ರಹಣ ಶಿಬಿರವನ್ನು ಏರ್ಪಡಿಸಲಾಗಿತ್ತು.

ಹಲವು ಸಮಸ್ಯೆ-ಸವಾಲುಗಳಿಂದಾಗಿ ಬೆಳ್ಳಿತೆರೆ ತನ್ನ ಮಹತ್ವವನ್ನು ಕಳೆದುಕೊಂಡು ಸೊರಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಕಲೆ ಮತ್ತು ಕಲಾವಿದರನ್ನು ಪೋಷಿಸುವ ಮನಸ್ಸುಗಳ ತುರ್ತು ಅಗತ್ಯವಿದೆ.

ಶರಣ್, ಚಲನಚಿತ್ರ ನಟ.

ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳಬಹುದಾದ ಜಿಲ್ಲೆ ಶಿವಮೊಗ್ಗ. ಕಲೆ, ಸಾಹಿತ್ಯ, ಸಿನಿಮಾ, ರಂಗಭೂಮಿ, ರಾಜಕಾರಣ ಹೀಗೆ ಹಲವು ಕ್ಷೇತ್ರಗಳಿಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರ.

ಕಾರುಣ್ಯರಾಮ್, ಚಲನಚಿತ್ರ ನಟಿ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ