ಮೈಸೂರು: ಕಾಲ ಬದಲಾದಂತೆ ಸಿನಿಮಾದ ಅಭಿರುಚಿ ಬದಲಾಗಿದೆ ಎಂದು ಚಲನಚಿತ್ರ ಸಂಭಾಷಣಕಾರ ಮಾಸ್ತಿ ಹೇಳಿದರು.
ಮೈಸೂರು ವಿವಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ 52ನೇ ಕನ್ನಡದ ಪುನಶ್ಚೇತನ ಶಿಬಿರದಲ್ಲಿ ಚಲನಚಿತ್ರ ಸಂಭಾಷಣೆಯ ಬೆಳವಣಿಗೆ ಕುರಿತು ಮಾತನಾಡಿದ ಅವರು, ಕಥೆಗೆ ಪೂರಕವಾದ ಸಂಭಾಷಣೆ ಮತ್ತು ಹಾಡುಗಳು ಇದ್ದಾಗ ಮಾತ್ರ ಒಂದು ಸಿನಿಮಾ ಗೆಲ್ಲಲು ಸಾಧ್ಯ ಎಂದರು.
ಕೆಲವು ಬಾರಿ ಸಿನಿಮಾ ಕಥೆಗೆ ತಕ್ಕಂತೆ ಸಂಭಾಷಣೆ ಇರುತ್ತದೆ. ಅದರೆ ಅದು ಎಷ್ಟೋ ಬಾರಿ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವುದುಂಟು. ಸಿನಿಮಾವನ್ನು ಸಿನಿಮಾ ರೀತಿ ನೋಡುವುದು ಉತ್ತಮ ಎಂದು ಸಲಹೆ ನೀಡಿದರು.
ಕಾಟೇರ ಚಿತ್ರದಲ್ಲಿನ ಉಳುವವನೇ ಭೂ ಒಡೆಯ ಮತ್ತು ಜಾತಿ ವೈಷಮ್ಯದ ಎರಡು ದೃಷ್ಟಿಕೋನವನ್ನು ಸಂಭಾಷಣೆಯ ಮೂಲಕ ನೋಡಬಹುದು ಎಂದು ತಿಳಿಸಿದರು.
ಸಿನಿಮಾ ಜಗತ್ತಿಗೆ ಸಂಭಾಷಣೆ ಬಹಳ ಮುಖ್ಯ, ನಮ್ಮ ಸಂಭಾಷಣೆ ಉತ್ತಮ ಸಂಭಾವನೆಯನ್ನು ನೀಡುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ನಾನು ಎನ್ನುವುದನ್ನು ಬಿಟ್ಟರೆ ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೆ ಬೆಳೆಯುತ್ತದೆ. ಸಿನಿಮಾದಲ್ಲಿ ಬ್ರಿಡ್ಜ್ ಸಿನಿಮಾ, ಕಲಾ ಸಿನಿಮಾ, ಕಮರ್ಶಿಯಲ್ ಸಿನಿಮಾ ಈ ರೀತಿ ಇರುತ್ತವೆ. ಕಲಾ ಸಿನಿಮಾವನ್ನು ಮೂಲ ಕಥೆಗೆ ಧಕ್ಕೆಯಾಗದಾಗೆ ತೆಗೆದು ಕೊಳ್ಳುತ್ತೇವೆ. ಉಳಿದವು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಲಾಗುವುದು ಎಂದರು.
ಮೊಬೈಲ್ ಬಿಟ್ಟು ಜನರು ಪುಸ್ತಕದ ಕಡೆ ಮುಖ ಮಾಡುವ ಸಂದರ್ಭ ಬರುತ್ತದೆ. ಕನ್ನಡ ಸಾಹಿತ್ಯಕ್ಕೂ ಸಿನಿಮಾ ಸಂಭಾಷಣೆಗೂ ನಿಕಟ ಸಂಬಂಧ ಇದೆ. ಎಷ್ಟೋ ಪದಗಳು ನಮಗೆ ಕನ್ನಡ ಸಾಹಿತ್ಯದಿಂದ ದೊರೆಯುತ್ತದೆ. ಹಾಗಾಗಿ ನಾವು ಸಾಹಿತ್ಯವನ್ನು ಓದಬೇಕಿದೆ ಎಂದು ಅವರು ಹೇಳಿದರು.
ಕಾನೂನು ಪದವಿ ಬಿಟ್ಟು ಸಂಭಾಷಣೆ ಬರೆಯುವ ಕಡೆ ಮುಖ ಮಾಡಿದೆ ನನಗೆ ಇಂದು ಕನ್ನಡ ಸಿನಿಮಾ ಕ್ಷೇತ್ರ ಬದುಕು ಕಟ್ಟಿಕೊಟ್ಟಿದೆ. ನಾವು ಬರೆಯುವ ಸಂಭಾಷಣೆ ಜನರಿಗೆ ಸ್ಫೂರ್ತಿಯಾದಾಗ ಮಾತ್ರ ನಮಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಈ ವೇಳೆ ಪ್ರಸಾರಾಂಗದ ನಿರ್ದೇಶಕ ಹಾಗೂ ಶಿಬಿರದ ಸಂಯೋಜಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಮಾಳವಿಯ ಮಿಷನ್ ಶಿಕ್ಷಕರ ತಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ. ಜ್ಯೋತಿ, ಸಹಾಯಕ ಪ್ರಾಧ್ಯಾಪಕ ನಂಜುಂಡಸ್ವಾಮಿ, ಸಂಶೋಧಕ ಎಚ್.ಎಸ್. ಶಂಕರ ಮೊದಲಾದವರು ಇದ್ದರು.