ಮನವಿ ಪತ್ರಗಳನ್ನು ಬೀಸಾಡಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ

KannadaprabhaNewsNetwork |  
Published : Jul 13, 2024, 01:33 AM IST
ರೈತರು, ಸಾರ್ವಜನಿಕರ ಮನವಿ ಪತ್ರಗಳನ್ನು ಬೀಸಾಡಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ-ಬಸವಣ್ಣ | Kannada Prabha

ಸಾರಾಂಶ

ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕುಮಾರ್, ಕುಂತೂರು ನಂಜುಂಡಸ್ವಾಮಿ, ಹೆಗ್ಗೋಠಾರ ವಿಜಯಕುಮಾರ್ ಇದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರು, ಸಾರ್ವಜನಿಕರು ತಮ್ಮ ಮನವಿ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಸಲ್ಲಿಸಿದ್ದ ಮನವಿ ಪತ್ರಗಳನ್ನು ಕಾರ್ಯಕ್ರಮದ ಸ್ಥಳದಲ್ಲೇ ಬೀಸಾಡಿ ಹೋಗಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಖಂಡಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ಆಗಮಿಸಿದ್ದ ವೇಳೆ ರೈತ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ನೀಡಿದ್ದ ಮನವಿ ಪತ್ರಗಳನ್ನು ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಶಿಷ್ಯ, ರೈತರ ಪರ ಎಂದು ಬೊಗಳೆ ಬಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮನವಿಗಳನ್ನು ಅಲ್ಲಿಯೇ ಬಿಸಾಡಿ ಹೋಗಿರುವುದು ಅವರ ರೈತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲ್ಲಿಸಿ ತೆರಳಿದ್ದರು. ಆದರೆ ಸ್ವೀಕರಿಸಿದ್ದ ಮನವಿ ಪತ್ರಗಳನ್ನು ವೇದಿಕೆ ಬಳಿಯೇ ಎಸೆಯಲಾಗಿದೆ. ಸಾರ್ವಜನಿಕರು ವೇದಿಕೆ ಬಳಿ ತೆರಳಿ ನೋಡಿದಾಗ ಮನವಿ ಪತ್ರಗಳು ಬೀಸಾಡಿರುವುದು ಗಮನಕ್ಕೆ ಬಂದಿದೆ. ಮನವಿ ಪತ್ರಗಳನ್ನು ಬೀಸಾಡಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಕಾಟಾಚಾರಕ್ಕೆ ಮನವಿ ಪತ್ರಗಳನ್ನು ಸಿಎಂ ಸ್ವೀಕರಿಸಿ ಹೋಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ಉದ್ದೇಶದಿಂದ ನೀಡುವ ಮನವಿ ಪತ್ರಗಳನ್ನು ನೀಡಿದರೆ ಅದನ್ನು ಅಲ್ಲಿಯೇ ಎಸೆದು ಹೋದರೆ ಹೇಗೆ ಇವರು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇವರು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ, ತಕ್ಷಣ ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.ಸಮಾಜವಾದಿ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯ ಅವರ ನಿಜ ಮುಡಾ ಪ್ರಕರಣದಿಂದ ಬಯಲಾಗಿದೆ. ತನಿಖೆ ಮುಗಿಯುವ ವರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಚಾಮರಾಜನಗರ ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ರೈತ ಸಂಘ ಇವರ ವಿರುದ್ಧ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕುಮಾರ್, ಕುಂತೂರು ನಂಜುಂಡಸ್ವಾಮಿ, ಹೆಗ್ಗೋಠಾರ ವಿಜಯಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ