ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಹಿಳೆಯ ಹಕ್ಕು, ರಕ್ಷಣೆ, ದೌರ್ಜನ್ಯ ತಡೆಯಂಥ ಕಾನೂನಿನ ಬಗ್ಗೆ ನಾಗರಿಕರಲ್ಲಿ ಅರಿವು ಇದ್ದಲ್ಲಿ ಸಮಾಜಕ್ಕೆ ಒಳಿತಾಗುವ ಜತೆಗೆ ದೌರ್ಜನ್ಯ ಅಥವಾ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಬಹಳ ಉಪಯುಕ್ತವಾಗಲಿದೆ ಎಂದು ಸಿವಿಲ್ ನ್ಯಾಯಾಧೀಶರಾದ ಚೇತನ ಅವರು ತಿಳಿಸಿದರು.ಪಟ್ಟಣದ ಪುರಸಭಾ ಸಭಾಂಗಣ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ ಕುರಿತು ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಉನ್ನತಿಗಾಗಿ ಹಲವಾರು ಕಾನೂನುಗಳು ಇದ್ದು, ಪ್ರಜ್ಞಾವಂತರಾದ ನೀವು ನಿಮ್ಮ ಬಡಾವಣೆ, ಅಕ್ಕಪಕ್ಕದ ಮನೆಗಳು ಅಥವಾ ಕೆಲವೊಂದು ಅಹಿತಕರ ಘಟನೆಗಳ ಬಗ್ಗೆ ಗಮನಕ್ಕೆ ಬಂದಾಗ ಕಾನೂನಿನ ಬಗ್ಗೆ ಅರಿವು ಇದ್ದಲ್ಲಿ ಕಾನೂನಿನ ಅಡಿಯಲ್ಲಿ ಅಗತ್ಯ ಕ್ರಮ ಅಥವಾ ಸೇವೆ ಪಡೆಯಲು ಸಾಧ್ಯ. ಕೆಲವೊಂದು ಕಡೆ ಕಾನೂನಿನ ದುರುಪಯೋಗ ತಡೆಗಟ್ಟುವುದು ಹಾಗೂ ಜಾರಿಯಾಗಿರುವ ಕಾನೂನಿನ ಉದ್ದೇಶವನ್ನು ಅರ್ಥೈಸಿಕೊಂಡು, ಕಾನೂನು ಹಾಗೂ ಯೋಜನೆಗಳ ಸದುಪಯೋಗ ಪಡೆದು ದೇಶದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವ ಜತೆಗೆ ಸಂಕಷ್ಟಕ್ಕೆ ಸಿಲುಕಿನ ಮಹಿಳೆಯ ರಕ್ಷಣೆ ಹಾಗೂ ಕಾನೂನಿನ ದುರುಪಯೋಗ ತಡೆಗಟ್ಟುವ ಜವಾಬ್ದಾರಿಯ ವರ್ತನೆಯೂ ಅಗತ್ಯವಾಗಿದೆ ಎಂದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಶಾಲು, ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ತಾಪಂ ಇಒ ಜಿ.ಮುನಿರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್ ಮಾತನಾಡಿದರು. ಹಿರಿಯ ವಕೀಲ ಕೆ.ಆರ್.ಜಯಪ್ರಕಾಶ್ ಪ್ರಧಾನ ಭಾಷಣ ಮಾಡಿದರು.ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ನ್ಯಾಯಾಂಗ ಇಲಾಖೆಯ ಕುಮಾರ್, ಪುರಸಭೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಇತರರು ಇದ್ದರು.