ಭೂ ಹೋರಾಟಗಾರರ ಬಿಡುಗಡೆಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

KannadaprabhaNewsNetwork |  
Published : Jun 27, 2025, 12:48 AM IST
26ಎಚ್ಎಸ್ಎನ್12 :  | Kannada Prabha

ಸಾರಾಂಶ

ದೇವನಹಳ್ಳಿಯಲ್ಲಿ ಬಲವಂತದ ಭೂಸ್ವಾಧೀನ ವಿರೋಧಿಸಿದ ಹೋರಾಟಗಾರರನ್ನು ಬಂಧಿಸಿದ ಪೊಲೀಸರ ದೌರ್ಜನ್ಯ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಹಾಗೂ ಕಾರ್ಪೋರೇಟ್ ಬಂಡವಾಳಶಾಹಿಗಳ ಪರವಾದ ನೀತಿಯನ್ನು ಖಂಡಿಸಿ ಹಾಗೂ ತಕ್ಷಣ ಭೂ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ನಗರದ ಮಹಾವೀರ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ಪ್ರತಿಭಟಿಸಿ ಸಭೆ ನಡೆಸಿದರು. ಸರ್ಕಾರ ಅವರ ಇಷ್ಟು ದಿನಗಳ ಹೋರಾಟಕ್ಕೆ ಒತ್ತಾಯಕ್ಕೆ ಕಿವಿಕೊಡದೇ ಭೂ ಸ್ವಾಧೀನ ಪ್ರಕ್ರಿಯೆಯ ಅಂತಿಮ ಘಟ್ಟಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ಜೂನ್ ೨೫ರಂದು ಈ ಹೋರಾಟ ಬೆಂಬಲಿಸಿ ರಾಜ್ಯದ ಮೂಲೆ ಮೂಲೆಗಳಿಂದ ರೈತ, ಕಾರ್ಮಿಕ, ದಲಿತ, ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದೇವನಹಳ್ಳಿಯಲ್ಲಿ ಬಲವಂತದ ಭೂಸ್ವಾಧೀನ ವಿರೋಧಿಸಿದ ಹೋರಾಟಗಾರರನ್ನು ಬಂಧಿಸಿದ ಪೊಲೀಸರ ದೌರ್ಜನ್ಯ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಹಾಗೂ ಕಾರ್ಪೋರೇಟ್ ಬಂಡವಾಳಶಾಹಿಗಳ ಪರವಾದ ನೀತಿಯನ್ನು ಖಂಡಿಸಿ ಹಾಗೂ ತಕ್ಷಣ ಭೂ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ನಗರದ ಮಹಾವೀರ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ಪ್ರತಿಭಟಿಸಿ ಸಭೆ ನಡೆಸಿದರು. ಇದೇ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನದ ವಿರುದ್ಧ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಿ ಹೋರಾಟಗಾರರನ್ನು ಬಂಧಿಸಿದ್ದಾರೆ. ಸರ್ಕಾರದ ಈ ಕ್ರಮವನ್ನು ನಾವು ನಮ್ಮ ಸಂಘಟನೆಗಳಿಂದ ಖಂಡಿಸುತ್ತೇವೆ. ಚನ್ನರಾಯಪಟ್ಟಣ ಹೋಬಳಿಯ ೧೩ ಹಳ್ಳಿಗಳ ತಮ್ಮ ೧೧೭೭ ಎಕರೆ ಭೂಮಿ ಉಳಿಸಿಕೊಳ್ಳಲು ೧೧೮೧ ದಿನಗಳಿಂದ ಪ್ರಜಾತಾಂತ್ರಿಕ ಹೋರಾಟ ಮಾಡುತ್ತಿದ್ದರು. ಸರ್ಕಾರ ಅವರ ಇಷ್ಟು ದಿನಗಳ ಹೋರಾಟಕ್ಕೆ ಒತ್ತಾಯಕ್ಕೆ ಕಿವಿಕೊಡದೇ ಭೂ ಸ್ವಾಧೀನ ಪ್ರಕ್ರಿಯೆಯ ಅಂತಿಮ ಘಟ್ಟಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ಜೂನ್ ೨೫ರಂದು ಈ ಹೋರಾಟ ಬೆಂಬಲಿಸಿ ರಾಜ್ಯದ ಮೂಲೆ ಮೂಲೆಗಳಿಂದ ರೈತ, ಕಾರ್ಮಿಕ, ದಲಿತ, ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದರು.

ಪ್ರತಿಭಟನೆಯ ತೀರ್ಮಾನದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆದಿತ್ತು. ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟು ಕಾರ್ಪೋರೇಟ್ ಬಂಡವಾಳಿಗರಿಗೆ ಮೃಷ್ಟಾನ್ನ ತಿನ್ನಿಸುವ ಯೋಜನೆಯ ಈ ಸಂಚು ಜನವಿರೋಧಿ ಎಂಬುದು ಎಲ್ಲರ ಒಕ್ಕೊರಲಿನ ಕೂಗಾಗಿತ್ತು. ಸರ್ಕಾರ ತನ್ನ ಭೂ ಸ್ವಾಧೀನ ನೀತಿ ಕೈ ಬಿಡುವವರೆಗೂ ದೇವನಹಳ್ಳಿ ಸಂತೆಮೈದಾನದಲ್ಲಿ ಅನಿರ್ದಿಷ್ಟ ಅವಧಿಗಳ ಕಾಲ ಈ ಹೋರಾಟವನ್ನು ಶಾಂತಿಯುತವಾಗಿ ಮುಂದುವರಿಸಲು ನಿರ್ಧರಿಸಿದ್ದರು. ಸಂಜೆ ಐದು ಗಂಟೆಯವರೆಗೆ ಬಹುದೊಡ್ಡ ಸಂಖ್ಯೆಯಲ್ಲಿ ಸಭೆ ಸೇರಿದ್ದರಿಂದ ಅಲ್ಲಿ ತನಕ ಏನೂ ಹೇಳದ ಪೋಲೀಸರು ಐದು ಗಂಟೆ ನಂತರ ಪ್ರಜಾಸತ್ತಾತ್ಮಕ ಹೋರಾಟವನ್ನು ಪ್ರತಿಬಂಧಿಸಿ ಹೋರಾಟಗಾರರನ್ನು ಅಮಾನವೀಯವಾಗಿ ಹಿಂಸಿಸಿ ಬಂಧಿಸಿದ್ದಾರೆ ಎಂದು ದೂರಿದರು.

ಈ ಬಂಧನವನ್ನು ನಾವು ತೀವ್ರವಾಗಿ ಖಂಡಿಸಿ ಹಾಗೂ ರಾಜ್ಯ ಸರ್ಕಾರದ ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸಿ ಸಿಐಟಿಯು, ಕೆಪಿಆರ್‌ಎಸ್, ದಲಿತ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸುವ ಮುಖಾಂತರ ಆಗ್ರಹಿತ್ತೇವೆ. ಫಲವತ್ತಾದ ಭೂಮಿಯಲ್ಲಿ ತಮ್ಮ ಬದುಕು ಕಂಡುಕೊಂಡ ಯಾವುದೇ ರೈತರ ತಂಟೆಗೆ ಬರಬೇಡಿ. ರೈತರ ಭೂಮಿ ರೈತರದ್ದೇ ಆಗಿ ಉಳಿಸಬೇಕು, ಬೇಷರತ್ತಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ರೈತರ ಭೂಮಿಯನ್ನು ಸರ್ಕಾರದ ಯಾವುದೇ ಯೋಜನೆಗೆ ನೀಡಬಾರದು, ಕೂಡಲೇ ಕ್ಯಾಬಿನೆಟ್ ನಿರ್ಣಯ ಮಾಡಬೇಕು. ಬಂಧಿತ ಹೋರಾಟಗಾರರನ್ನು ಯಾವುದೇ ಪ್ರಕರಣಗಳನ್ನು ಹಾಕದೇ ಬೇಷರತ್ ಬಿಡುಗಡೆ ಮಾಡಬೇಕು. ವೈಯಕ್ತಿಕವಾಗಿ ಸಂಘಟನಾತ್ಮಕವಾಗಿ ಆಗಿರುವ ಅನಾಹುತ ಸರಕಾರವೇ ತುಂಬಿಕೊಡಬೇಕು ಎಂದು ಒತ್ತಾಯಿಸಿದರು. ಅಮಾನವೀಯ ದೌರ್ಜನ್ಯ ಎಸಗಿದ ಪೋಲಿಸರ ಮೇಲೆ ಕ್ರಮಕೈಗೊಳ್ಳಬೇಕು, ತನಿಖೆ ನಡೆಸಬೇಕು. ಇನ್ನೆಂದೂ ಹೋರಾಟವನ್ನು ಮುರಿಯುವ ಅಸಾಂವಿಧಾನಿಕ ಕೆಲಸ ಮಾಡಬಾರದು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ದಲಿತ ನಾಯಕ ಅಂಬುಗ ಮಲ್ಲೇಶ್, ಕೆಪಿಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಹೆಚ್.ಎಸ್. ಮಂಜುನಾಥ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಸಂವಿಧಾನ ಓದು ಅಭಿಯಾನದ ರಾಜು ಗೊರೂರು, ಎಸ್.ಎಫ್.ಐ ಮುಖಂಡ ರಾಜು ಸಿಗರನಹಳ್ಳಿ, ನವಾದಿ ಮಹಿಳಾ ಸಂಘಟನೆಯ ಜಯಲಕ್ಷ್ಮಿ ಇತರರು ಉಪಸ್ಥಿತರಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ