ಚಿಕ್ಕಮಗಳೂರು ನಗರಸಭೆಯ ಇತಿಹಾಸದಲ್ಲೇ ಪ್ರಥಮ, ಬಿಜೆಪಿಗೆ ಮುಜುಗರ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಮ್ಮ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ವರಸಿದ್ಧಿ ವೇಣುಗೋಪಾಲ್ ಅವರು ರಾಜೀನಾಮೆ ನೀಡಿ, ನಂತರದಲ್ಲಿ ವಾಪಸ್ ತೆಗೆದುಕೊಂಡಿದ್ದರು. ಎರಡನೇ ಬಾರಿಯೂ ರಾಜೀನಾಮೆ ಕೊಟ್ಟು ಅದು, ಅಂಗೀಕೃತ ಆಗುವ ಮುನ್ನವೇ ವಾಪಸ್ ತೆಗೆದುಕೊಂಡಿದ್ದಾರೆ. ಇದು, ಚಿಕ್ಕಮಗಳೂರು ನಗರಸಭೆಯ ಇತಿಹಾಸದಲ್ಲೇ ಫಸ್ಟ್ ಟೈಂ ಆಗಿರುವ ಬೆಳವಣಿಗೆ. ನಗರಸಭೆಯ ಅಧ್ಯಕ್ಷರ ಮೊದಲ ಅವಧಿ ಎರಡೂವರೆ ವರ್ಷವಾಗಿದ್ದು, ಬಿಜೆಪಿಗೆ ಬಹುಮತ ಇದ್ದರಿಂದ ಮೂರು ಮಂದಿಗೆ ತಲಾ 10 ತಿಂಗಳು ಹಂಚಿಕೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಆದರೆ, ವಿಧಾನಸಭಾ ಚುನಾವಣೆ ಹಾಗೂ ಇತರೆ ಕಾರಣದಿಂದಾಗಿ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಈವರೆಗೆ ಮುಂದುವರೆಯುತ್ತಾ ಬಂದಿದ್ದಾರೆ. ಪಕ್ಷದ ಒತ್ತಾಯದ ಮೇರೆಗೆ ಜುಲೈ ತಿಂಗಳಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದು, ಅಂಗೀಕೃತವಾಗುವ ಮೊದಲೇ ವಾಪಸ್ ತೆಗೆದುಕೊಂಡರು. ಅವರ ಈ ನಡೆಯ ಬಗ್ಗೆ ಬಿಜೆಪಿ ನಗರಸಭಾ ಸದಸ್ಯರು ಅಸಮಧಾನಗೊಂಡಿದ್ದರು. ಬರೀ ಇಷ್ಟೆ ಅಲ್ಲಾ, ಸಾಮಾನ್ಯಸಭೆಯಲ್ಲಿ ಅಧ್ಯಕ್ಷರಿಗೆ ಅಸಹಕಾರ ತೋರಿದ್ದರು. ಇದೀಗ ಅ. 4 ರಂದು ಅವರು ಮತ್ತೆ ರಾಜೀನಾಮೆ ನೀಡಿದ್ದರು. ಅದು, ಅ. 14 ರಂದು ಅಂಗೀಕೃತವಾಗುವ ಮೊದಲೇ ಅಂದರೆ, ಶನಿವಾರ ರಜೆ ದಿನವಾಗಿದ್ದರಿಂದ ಶುಕ್ರವಾರ ಸಂಜೆಯೇ ವಾಪಸ್ ತೆಗೆದುಕೊಂಡಿದ್ದಾರೆ. ಈ ಬೆಳವಣಿಗೆ ಬಿಜೆಪಿಯ ಯಾವುದೇ ನಗರಸಭೆ ಸದಸ್ಯರಿಗಾಗಲೀ, ಪಕ್ಷದ ಮುಖಂಡರ ಗಮನಕ್ಕೆ ಬಂದಿಲ್ಲ. ಸೋಮವಾರದ ನಂತರ ಹೊಸ ಅಧ್ಯಕ್ಷರ ಆಯ್ಕೆಯ ಸಿದ್ಧತೆಯನ್ನು ಪಕ್ಷ ಮಾಡಿ ಕೊಳ್ಳಬೇಕಾಗಿತ್ತು. ಆದರೆ, ಅಧ್ಯಕ್ಷರ ರಾಜೀನಾಮೆ ಹೊಸ ಅಧ್ಯಕ್ಷರ ಆಯ್ಕೆಗೆ ತಣ್ಣೀರು ಎರಚಿದೆ. ರಾಜೀನಾಮೆ ಪತ್ರವನ್ನು ವಾಪಸ್ ತೆಗೆದುಕೊಂಡಿರುವ ಅಧ್ಯಕ್ಷರು ಶುಕ್ರವಾರವೇ ಕೇಂದ್ರ ಸ್ಥಾನದಿಂದ ಹೊರಗೆ ತೆರಳಿದ್ದಾರೆ. ಈ ವಿಷಯ ಶನಿವಾರ ಗಮನಕ್ಕೆ ಬರುತ್ತಿದ್ದಂತೆ ಪಕ್ಷದ ಮುಖಂಡರು ಸಂಪರ್ಕಿಸಲು ಮೊಬೈಲ್‌ಗೆ ಕರೆ ಮಾಡಿದಾಗ ಅವರ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯಿಂದ ಹೊರಗೆ ಇತ್ತು. ಒಟ್ಟಾರೆ ನಗರಸಭೆ ಈ ನಡೆ ಹಾಸ್ಯಾಸ್ಪದವಾಗಿದೆ. ಶಿಸ್ತಿನ ಪಕ್ಷ ಬಿಜೆಪಿಗೆ ಮುಜುಗರವಾಗಿದೆ. ಪೋಟೋ ಫೈಲ್ ನೇಮ್ 14 ಕೆಸಿಕೆಎಂ 5