ಕನ್ನಡಪ್ರಭ ವಾರ್ತೆ ಬೆಳಗಾವಿ
ಜ.14ರಂದು ಮಧ್ಯಾಹ್ನ 12ಕ್ಕೆ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ನಗರ 2.0 ಯೋಜನೆಯ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಆದರೆ, ಸಭೆಯು ನಿಗದಿತ ಸಮಯಕ್ಕಿಂತ ಮಧ್ಯಾಹ್ನ 1.30ಕ್ಕೆ ತಡವಾಗಿ ಆರಂಭವಾಯಿತು. ಅಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ನಗರಸೇವಕ ಶಾಹಿದ್ ಪಠಾಣ್ ಅವರು ಕೌನ್ಸಿಲ್ ಹಾಲ್‌ನ ನೆಲದ ಮೇಲೆ ಕುಳಿತು ಧರಣಿ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಅಕಾರಿಗಳು ಜನಪ್ರತಿನಿಧಿಗಳು ಸಮಯಕ್ಕೆ ಬೆಲೆ ನೀಡುತ್ತಿಲ್ಲ. ತಮಗೆ ಬೇಕಾದಾಗ ಸಭೆ ಆರಂಭಿಸುತ್ತಾರೆ ಎಂದು ಆರೋಪಿಸಿದರು.
ಈ ವೇಳೆ ಸಭೆಯ ವಿಳಂಬಕ್ಕೆ ಸಂಬಂಸಿದಂತೆ ಸ್ಮಾರ್ಟ್ ಸಿಟಿ ಅಕಾರಿಗಳು, ನಗರ ಸೇವಕರಲ್ಲಿ ಕ್ಷಮೆಯಾಚಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂಬ ಭರವಸೆ ನೀಡಿದರು. ಜತೆಗೆ ಸಭೆಯಲ್ಲಿದ್ದ ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ಜೋಶಿ, ಪಾಲಿಕೆ ಆಯುಕ್ತ ಎಂ.ಕಾರ್ತಿಕ ಅವರು ಮನವೊಲಿಸಿದ ಬಳಿಕ ಶಾಹಿದ್ ಪಠಾಣ ಪ್ರತಿಭಟನೆ ಹಿಂಪಡೆದರು. ತದನಂತರ ಸಭೆಯು ಸುಗಮವಾಗಿ ಮುಂದುವರಿಯಿತು.