ಶಿವಾನಂದ ಗೊಂಬಿ
ನೀರು ಸರಬರಾಜಿನಲ್ಲಿ ಸಮರ್ಪಕತೆ ತರುವ ಉದ್ದೇಶ, ನಿರಂತರ ನೀರು ಯೋಜನೆ ಅನುಷ್ಠಾನದಲ್ಲಿ ಗುಣಮಟ್ಟ ಕಾಯ್ದಿರಿಸುವಿಕೆಗಾಗಿ ಹುಬ್ಬಳ್ಳಿ- ಧಾರವಾಡ ಸೇರಿದಂತೆ 3 ಮಹಾನಗರ ಪಾಲಿಕೆಗಳಲ್ಲಿ ಸಿಟಿ ವಾಟರ್ ಕಂಪನಿ (ಸಿಡಬ್ಲುಸಿ) (ನಗರ ಜಲ ಕಂಪನಿ) ಅಸ್ತಿತ್ವಕ್ಕೆ ಬರಲಿವೆ. ಕಾರ್ಪೊರೇಟ್ ಕಂಪನಿ ಮಾದರಿಯಲ್ಲಿ ಬರಲಿರುವ ನಗರ ಜಲ ಕಂಪನಿಗಳು ಕಾರ್ಯನಿರ್ವಹಿಸಲಿದ್ದು, ತೆರಿಗೆ ನಿಗದೀಕರಣ, ನೀರು ಸರಬರಾಜು, ಭವಿಷ್ಯದ ಯೋಜನೆಗಳನ್ನೆಲ್ಲ ಇದೇ ನಿರ್ಧರಿಸಲಿದೆ.
ಯಾವ್ಯಾವ ಪಾಲಿಕೆ?:ವಿಶ್ವಬ್ಯಾಂಕಿನ ನೆರವಿನೊಂದಿಗೆ 24x7 ಯೋಜನೆ ಕಾಮಗಾರಿ ನಡೆಯುತ್ತಿರುವ ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ ಮಹಾನಗರ ಪಾಲಿಕೆಗಳಲ್ಲಿ ಈ ಕಂಪನಿಗಳು ಬರಲಿವೆ. 24x7 ಯೋಜನೆ ಕಾಮಗಾರಿಗೆ ವಿಶ್ವಬ್ಯಾಂಕ್ 3 ಪಾಲಿಕೆಗೆ ಸೇರಿ ಒಟ್ಟು ₹2574 ಕೋಟಿ ವಿನಿಯೋಗಿಸಿದೆ. ಇದೀಗ ಪರಿಷ್ಕರಣೆಗೊಂಡು ₹3740 ಕೋಟಿಗೆ ಏರಿದೆ. ಯೋಜನೆ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿದೆಯೋ ಇಲ್ಲವೋ ಎಂಬುದರ ಜವಾಬ್ದಾರಿಯನ್ನು ಕಾರ್ಪೊರೇಟ್ ಮಾದರಿಯ ಕಂಪನಿ ವಹಿಸಿಕೊಂಡರೆ ಉತ್ತಮ ಎಂಬ ಅಭಿಪ್ರಾಯ ವಿಶ್ವಬ್ಯಾಂಕಿನದ್ದು. ಅದರ ಸಲಹೆಯಂತೆ ಸರ್ಕಾರ ಕಂಪನಿ ರಚಿಸುವಂತೆ ಪಾಲಿಕೆಗೆ ಸೂಚಿಸಿದೆ.
ಕಂಪನಿಗಳ ಕಾಯ್ದೆ 2013ರ ಅಡಿಯನ್ನು ನಗರ ನೀರು ಕಂಪನಿ ರಚಿಸುವುದು. ಪಾಲಿಕೆ ಮತ್ತು ಕಂಪನಿ ನಡುವೆ ಒಪ್ಪಂದ ಮಾಡಿಕೊಂಡು ಈ ಕಂಪನಿ ನಡೆಸುವುದು. ನೀರು ಸರಬರಾಜು ವ್ಯವಸ್ಥೆ, ಪರಿಣಾಮಕಾರಿ ಅನುಷ್ಠಾನ, ಭವಿಷ್ಯದ ಯೋಜನೆ ರೂಪಿಸುವುದು. ತೆರಿಗೆ ನಿಗದೀಕರಣಗೊಳಿಸುವುದು. ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ವಿಶ್ವಬ್ಯಾಂಕಿನೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು ಸೇರಿದಂತೆ ನೀರು ಸರಬರಾಜಿಗೆ ಸಂಬಂಧಿಸಿದಂತೆ ಪ್ರತಿ ಕೆಲಸದ ಜವಾಬ್ದಾರಿಯನ್ನು ಇದೇ ವಹಿಸಿಕೊಳ್ಳಬೇಕು.
ಯಾರ್‍ಯಾರು ಇರುತ್ತಾರೆ?:ಈ ಕಂಪನಿಗೆ ಸರ್ಕಾರದ ಕಾರ್ಯದರ್ಶಿಗಳೇ ಅಧ್ಯಕ್ಷರಾಗಿದ್ದರೆ, ಪಾಲಿಕೆಯ ಆಯುಕ್ತರು, ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಇನ್ನು ಜಿಲ್ಲಾಧಿಕಾರಿ, ಜಿಪಂ ಸಿಇಒ, ಪಾಲಿಕೆ ಮೇಯರ್, ಹಣಕಾಸು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು, ನಗರ ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸ್ಥಾಯಿ ಸಮಿತಿ ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿದೇಶಕರು, ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಪಾಲಿಕೆಯ ಅಧೀಕ್ಷಕ ಅಭಿಯಂತರ ನಿರ್ದೇಶಕರು (ತಾಂತ್ರಿಕ) ಈ ಸಮಿತಿಗೆ ಸದಸ್ಯರಾಗಿರುತ್ತಾರೆ.
ಹೆಸ್ಕಾಂ ಖಾಸಗಿ ಕಂಪನಿಯಾಗಿದೆ. ಖಾಸಗಿ ಕಂಪನಿಯಾಗಿದ್ದರಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯಲ್ಲಿ ಸಿಟಿ ವಾಟರ್ ಕಂಪನಿಯೂ ನೀರು ಸರಬರಾಜುವಿನಲ್ಲಿ ಯಾವುದೇ ಲೋಪ, ದೋಷಗಳಾಗದಂತೆ ಕಾರ್ಯನಿರ್ವಹಿಸಲಿದೆ. ಇದು ಅತ್ಯಂತ ಯಶಸ್ವಿಯಾಗುತ್ತದೆ ಎಂಬ ಅಭಿಪ್ರಾಯ ತಜ್ಞರದ್ದು.ಸದ್ಯ ವಿಶ್ವ ಬ್ಯಾಂಕ್ ಸಲಹೆಯಂತೆ ಕಂಪನಿಯನ್ನೇನೋ ಮಾಡುತ್ತಿದೆ. ಆದರೆ ಇದನ್ನು ಪರಿಣಾಮಕಾರಿಯನ್ನಾಗಿಸಲು ರಚನೆಗೊಂಡ ಸಮಿತಿಯೂ ಅಷ್ಟೇ ಶ್ರಮ ಹಾಕಬೇಕಾಗುತ್ತದೆ. ಅನುದಾನ ಬರುವುದಕ್ಕಾಗಿ ಕಾಟಾಚಾರಕ್ಕೆಂಬಂತೆ ಮಾಡುತ್ತದೆಯೋ? ಅಥವಾ ನಿಜಕ್ಕೂ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತದೆಯೋ? ಎಂಬುದನ್ನು ಕಾಯ್ದು ನೋಡಬೇಕಿದೆ ಅಷ್ಟೇ.!
ಸಿಟಿ ವಾಟರ್ ಕಂಪನಿ ರಚಿಸುವಂತೆ ಸರ್ಕಾರದ ನಿರ್ದೇಶನವಿದೆ. ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೂ ಸಿಡಬ್ಲುಸಿ ರಚಿಸಲಾಗುತ್ತಿದೆ. ಇದರಿಂದ ನೀರು ಸರಬರಾಜು ಇನ್ನಷ್ಟು ಸಮರ್ಪಕವಾಗುತ್ತದೆ. ಜತೆಗೆ ನಿರಂತರ ನೀರು ಯೋಜನೆ ಕೆಲಸ ಸಮರ್ಪಕ ಅನುಷ್ಠಾನಕ್ಕೆ ನಿಗಾ ವಹಿಸಲು ಅನುಕೂಲವಾಗಲಿದೆ.- ವಿಜಯಕುಮಾರ, ಉಪ ಆಯುಕ್ತ, ಮಹಾನಗರ ಪಾಲಿಕೆ