ಹುಬ್ಬಳ್ಳಿ:
ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದ ಆಯೋಗದ ಅಧ್ಯಕ್ಷ ಪಿ. ರಘು ಅವರಿಗೆ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಮತ್ತು ಪದಾಧಿಕಾರಿಗಳು ಲಿಖಿತ ಮನವಿ ಸಲ್ಲಿಸಿ, ಅನಧಿಕೃತವಾಗಿ 2 ಗುತ್ತಿಗೆ ಪಡೆದಿರುವ ಅರವೇಡ ಅವರು ಪೌರಕಾರ್ಮಿಕರನ್ನು ವಿಪರೀತವಾಗಿ ಶೋಷಿಸುತ್ತಿದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಪ್ರಶ್ನಿಸಿದ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ಕಿತ್ತುಹಾಕಿ, ಜೀವ ಬೆದರಿಕೆ ಒಡ್ಡುತ್ತಿದ್ದಾರೆಂದು ತಮ್ಮ ಅಳಲು ತೋಡಿಕೊಂಡರು.
ಹಲವು ವರ್ಷಗಳಿಂದ ಕೃಷ್ಣ ಅರವೇಡ ಪಾಲಿಕೆಯಲ್ಲಿ ಅನಧಿಕೃತ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಮಿಕರಿಗೆ ಅತೀ ಕಡಿಮೆ ಸಂಬಳ ನೀಡುವ ಜತೆಗೆ ಪಿಎಫ್, ಇಎಸ್‌ಐ ಹಣವನ್ನೂ ಸಕಾಲಕ್ಕೆ ಕಟ್ಟುತ್ತಿಲ್ಲ. ಹಕ್ಕು ಕೇಳುವ, ದೂರು ನೀಡುವವರ ವಿರುದ್ಧ ದಬ್ಬಾಳಿಕೆ ಮಾಡುತ್ತಿದ್ದು, ತಕ್ಷಣ ಅವರಿಂದ ಪೌರಕಾರ್ಮಿಕರನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.ಪೌರಕಾರ್ಮಿಕರ ಸಮಸ್ಯೆಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ವಿಜಯ ಗುಂಟ್ರಾಳ, ಮೋಹನ ಹಿರೇಮನಿ ಮತ್ತು ಮಧುಕೇಶ ಮಾದರ, ನೇರ ನೇಮಕಾತಿಗೆ ಪಾಲಿಕೆ ಸಹಕರಿಸುತ್ತಿಲ್ಲ. ಗುತ್ತಿಗೆದಾರರ ವಿರುದ್ಧದ ಯಾವ ದೂರನ್ನೂ ಸ್ವೀಕರಿಸುವುದಿಲ್ಲ. ಕಾರ್ಮಿಕರಿಗೆ ಅತಿ ಕಡಿಮೆ ಸಂಬಳ ನೀಡಲಾಗುತ್ತಿದೆ. ಅವರ ಹಕ್ಕಿನ ರಜೆಗಳನ್ನೂ ನೀಡುತ್ತಿಲ್ಲ. ರಕ್ಷಣಾ ಪರಿಕರ ನೀಡುತ್ತಿಲ್ಲ. ಕಳಪೆ ಉಪಹಾರ ನೀಡಲಾಗುತ್ತಿದೆ. ಪೌರಕಾರ್ಮಿಕರಿಗೆ ಯಾವುದೇ ಗೌರವಯುತ ಬದುಕು ನೀಡಿದೇ ಅತಿಯಾಗಿ ಶೋಷಿಸಲಾಗುತ್ತಿದೆ. ಬದುಕಿನ ಅನಿವಾರ್ಯತೆಗೆ ಎಲ್ಲ ನೋವು ಸಹಿಸಿಕೊಂಡು ಕಾರ್ಮಿಕರು ದುಡಿಯುತ್ತಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಅವರಿಗೆ ನ್ಯಾಯ ಸಿಗಲಿ ಎಂದು ಆಯೋಗದ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ವಿಷ ಕುಡಿದ ಕಾರ್ಮಿಕ:ಲಿಖಿತ ಮನವಿ ಸ್ವೀಕರಿಸಿ, ತಮ್ಮ ಭೇಟಿಗೆ ಬಂದಿದ್ದ ಕೆಲವು ಪೌರಕಾರ್ಮಿಕರ ನೋವು ಆಲಿಸಿದ ಆಯೋಗದ ಅಧ್ಯಕ್ಷ ಪಿ.ರಘು, ಗುತ್ತಿಗೆದಾರನ ಕಿರುಕುಳಕ್ಕೆ ಮನನೊಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಕೃಷ್ಣಾ ಶಿಕ್ಕಲಗಾರ ಯುವಕನ ಕರುಣಾಜನಕ ಕತೆ ಕೇಳಿ ಮಮ್ಮಲ ಮರುಗಿದರು.
ಇಂಥ ಶೋಷಕರ ವಿರುದ್ಧ ಸಂಘಟಿತ ಹೋರಾಟ ಮಾಡಬೇಕೆ ವಿನಃ ಹೀಗೆ ಆತ್ಮಹತ್ಯೆಗೆ ಮುಂದಾಗಬಾರದು. ತಕ್ಷಣ ಆ ಗುತ್ತಿಗೆದಾರನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸುತ್ತೇನೆ. ಅಧಿಕಾರಿಗಳು ಈ ಕಾರ್ಮಿಕನ ಸಹಾಯಕ್ಕೆ ನಿಂತು ಬಾಕಿ ಸಂಬಳ, ರಜೆ, ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.ಒಂದೊಂದೇ ಸಮಸ್ಯೆಗಳನ್ನು ಶಾಂತಚಿತ್ತರಾಗಿ ಆಲಿಸಿದ ರಘು, ಈ ಎಲ್ಲವನ್ನು ನೋಟ್ ಮಾಡಿಕೊಳ್ಳಿ. ನಿಮ್ಮ ಮಟ್ಟದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ, ಇಷ್ಟರಲ್ಲಿಯೇ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರು ಸೇರಿದಂತೆ ಧಾರವಾಡ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಗಳ ಸಭೆಯನ್ನು ಹುಬ್ಬಳ್ಳಿಯಲ್ಲಿ ಕರೆದು ಸಮಗ್ರವಾಗಿ ಚರ್ಚಿಸಿ, ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.
ಪಾಲಿಕೆಯ ಎಇಇ ಸಂತೋಷ ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಿಯದರ್ಶಿನಿ ಹಿರೇಮಠ, ಎಚ್.ಬಿ. ಸಣ್ಣೇರ, ಸಂಘದ ಪದಾಧಿಕಾರಿಗಳು, ನೂರಾರು ಪೌರಕಾರ್ಮಿಕರು ಈ ಸಂದರ್ಭದಲ್ಲಿ ಇದ್ದರು.