ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ
ಅವಳಿ ನಗರದಲ್ಲಿ ಬೆಳಗ್ಗೆ ಎದ್ದ ತಕ್ಷಣ ಕೇಳುವುದು ಪಾಲಿಕೆ ಕಸ ಸಂಗ್ರಹ ವಾಹನ ಸ್ಪೀಕರ್ ಸದ್ದು, ನಾವಿನ್ನೂ ಹಾಸಿಗೆಯಲ್ಲಿರುವಾಗಲೇ ತಮ್ಮ ದೈನಂದಿನ ಸ್ವಚ್ಛತಾ ಕಾರ್ಯ ಆರಂಭಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಪಾಲಿಕೆಯಿಂದ ಸ್ವಚ್ಛತಾ ಪರಿಕರ, ಮಾಸ್ಕ್, ಕೈಗವಸು, ಶೂಗಳನ್ನು ನೀಡಿದ್ದರೂ ಅವುಗಳ ಬಳಕೆಯತ್ತ ಮನಸ್ಸು ಮಾಡುತ್ತಿಲ್ಲ.ತುಂಬಿ ಗಬ್ಬುನಾತ ಬೀರುತ್ತಿರುವ ಚರಂಡಿಗೆ ಇಳಿದ ಪೌರಕಾರ್ಮಿಕನೊಬ್ಬ ಬರಿಕೈಯಲ್ಲಿ ಗುದ್ದಲಿ ಹಿಡಿದು ಸ್ವಚ್ಛತೆ ಮಾಡುತ್ತಿದ್ದಾನೆ. ಮುಖಕ್ಕೆ ಮಾಸ್ಕ್ ಧರಿಸಿಲ್ಲ, ಕಾಲಿಗೆ ಮಾತ್ರ ಬೂಟು ಹಾಕಿದ್ದಾನೆ. ಇನ್ನೊಬ್ಬ ಪೌರಕಾರ್ಮಿಕ ಕಸದ ರಾಶಿಯ ಮಧ್ಯದಲ್ಲಿ ನಿಂತು ಕಸ ಬರಿಗೈಯಿಂದ ಹೆಕ್ಕಿ ತೆಗೆದು ಬುಟ್ಟಿಗೆ ತುಂಬುತ್ತಿದ್ದಾನೆ. ಪಕ್ಕದಲ್ಲಿಯೇ ಮಹಿಳಾ ಕಾರ್ಮಿಕಳೊಬ್ಬಳು ಗಲೀಜಿರುವ ಚೀಲವನ್ನು ಎತ್ತಿ ವಾಹನಕ್ಕೆ ಹಾಕುತ್ತಿದ್ದಾರೆ. ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತಂತೆ ಸ್ವಲ್ವವೂ ಯೋಚನೆ ಮಾಡದೆ ರಕ್ಷಣಾ ಸಾಮಗ್ರಿಗಳಿಲ್ಲದೆ ಕೆಲಸ ಮಾಡುತ್ತಿರುವುದು ದಿನನಿತ್ಯ ನಮ್ಮ ಕಣ್ಣಿಗೆ ಬೀಳುತ್ತಿದೆ.
ಪೌರಕಾರ್ಮಿಕರು ಸುರಕ್ಷಾ ಕವಚ ಧರಿಸಿ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಬಳಸಿಯೇ ಸ್ವಚ್ಛತಾ ಕಾರ್ಯ ಮಾಡಬೇಕೆಂದು ಸರ್ಕಾರ ನಿಯಮ ರೂಪಿಸಿದ್ದರೂ ಅರಿವಿನ ಕೊರತೆಯಿಂದಾಗಿ ಪೌರಕಾರ್ಮಿಕರು ಬರಿಗೈನಿಂದಲೇ ಚರಂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೇ, ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆ ಇದೆ.ರಾಜ್ಯದ ಇನ್ನುಳಿದ ಪಾಲಿಕೆಗಳಲ್ಲಿ ಪೌರಕಾರ್ಮಿಕರು ಕೇಳಿ ಸುರಕ್ಷತಾ ಪರಿಕರ ಪಡೆದು ಉಪಯೋಗಿಸುತ್ತಿದ್ದಾರೆ. ಇನ್ನು ಕೆಲವೆಡೆ ತಮಗೆ ಸುರಕ್ಷತಾ ಪರಿಕರ ನೀಡದ ಪಾಲಿಕೆ ಪುರಸಭೆಗಳ ವಿರುದ್ಧ ಪೌರಕಾರ್ಮಿಕರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಆದರೆ, ನಮ್ಮ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ ಹೀಗಿಲ್ಲ. ಪಾಲಿಕೆಯಿಂದ ಬಹುತೇಕ ಎಲ್ಲರಿಗೂ ಸ್ವಚ್ಛತಾ ಪರಿಕರ ನೀಡಿದ್ದರೂ ಅವುಗಳ ಬಳಕೆ ಮಾತ್ರ ಆಗುತ್ತಿಲ್ಲ.
ಈ ಕುರಿತು ಅವರನ್ನು ಕೇಳಿದರೆ, "ಸರ್ ಪಾಲಿಕೆಯಿಂದ ಸ್ವಚ್ಛತಾ ಪರಿಕರ ನೀಡಿದ್ದಾರೆ. ಅವುಗಳು ಮನೆಯಲ್ಲಿವೆ. ಇಂದು ಆತುರದಲ್ಲಿ ಮರೆತು ಬಂದೆ.. " ಎಂದು ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆ. ಇನ್ನೂ ಕೆಲವರು, "ಅವುಗಳನ್ನು ಬಳಸಿ ಕೆಲಸ ಮಾಡುವ ಅಭ್ಯಾಸ ನಮಗಿಲ್ಲ " ಎನ್ನುತ್ತಾರೆ. ಅವರಿಗೆ ಸ್ವಚ್ಛತಾ ಪರಿಕರಗಳ ಬಳಕೆಯ ಪ್ರಯೋಜನಗಳ ಕುರಿತಂತೆ ತಿಳಿಹೇಳುವ, ಜಾಗೃತಿ ಮೂಡಿಸುವ ಕಾರ್ಯಗಳು ಸಮರ್ಪಕವಾಗಿ ನಡೆಯದಿರುವದರಿಂದ ಪೌರ ಕಾರ್ಮಿಕರು ಪರಿಕರ ಬಳಕೆ ಮಾಡುತ್ತಿಲ್ಲ.ಪೌರ ಕಾರ್ಮಿಕರಿಗೆ ಕಾಲ ಕಾಲಕ್ಕೆ ರಕ್ಷಣಾ ಪರಿಕರಗಳನ್ನು ವಿತರಿಸಲಾಗಿದೆ. ಈ ಹಿಂದೆ ಸುಮಾರು ₹2.5 ಕೋಟಿ ಮೌಲ್ಯದ ಪರಿಕರಗಳನ್ನು ಪೌರಕಾರ್ಮಿಕರಿಗೆ ವಿತರಿಸಲಾಗಿದೆ. ಈ ಬಾರಿ ಮಹಿಳಾ ಪೌರಕಾರ್ಮಿಕರಿಗೆ ಅನಕೂಲವಾಗಲು ಶೂಗಳನ್ನು ನೀಡಲು ನಿರ್ಧರಿಸಲಾಗಿದೆ. ಕಾರ್ಮಿಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ರಕ್ಷಣಾ ಪರಿಕರಗಳನ್ನು ಬಳಸಲಿ ಎಂದು ಹು-ಧಾ ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನೀಯರ್ ಸಂತೋಷಕುಮಾರ ಯರಂಗಳಿ ತಿಳಿಸಿದ್ದಾರೆ.ಪೌರ ಕಾರ್ಮಿಕರು ಕಸವನ್ನು ತುಂಬುವ ಸಂದರ್ಭದಲ್ಲಿ ಅವರಿಗೆ ಹರಿತವಾದ ವಸ್ತುಗಳಿಂದ ಸಮಸ್ಯೆ ಆಗಬಹುದು. ಇನ್ನು ವಿಶೇಷವಾಗಿ ಅಲರ್ಜಿ ಸಮಸ್ಯೆ ಇರುವವರು ರಕ್ಷಣಾ ಪರಿಕರ ಬಳಸಿದರೆ ಮುಂದಿನ ದಿನಗಳಲ್ಲಿ ಅವರಿಗೆ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಪೌರ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅವರಿಗೆ ಸಲಕರಣೆಗಳನ್ನು ವಿತರಿಸಿದ್ದು ಅವುಗಳನ್ನು ಧರಿಸಿ ಕೆಲಸ ಮಾಡುವುದು ಉತ್ತಮ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ. ಹೊನಕೇರಿ ತಿಳಿಸಿದ್ದಾರೆ.
ಪಾಲಿಕೆಯಿಂದ ಗ್ಲೌಸ್, ಶೂ, ಮಾಸ್ಕ್, ರೇನ್ ಕೋಟ್ ನೀಡಿದ್ದಾರೆ. ರೇನ್ ಕೋಟ್ ಬಳಸುತ್ತೇವೆ. ಗ್ಲೌಸ್, ಶೂ ಹಾಕಿಕೊಂಡು ಕೆಲಸ ಮಾಡಲು ರೂಢಿಯಿಲ್ಲ, ಅದು ಅನುಕೂಲವಾಗುವುದಿಲ್ಲ. ಹೀಗಾಗಿ, ಬಳಸುವುದಿಲ್ಲ. ಸಾಧನ ಸಲಕರಣೆ ಬಳಸುತ್ತೇವೆ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ.