125 ನೀಟ್ ಪುನರಾವರ್ತಿತ ಅಭ್ಯರ್ಥಿಗಳಿಗೆ ಶಿಷ್ಯವೇತನ: ಅಬ್ದುಲ್ ಖದೀರ್‌

KannadaprabhaNewsNetwork |  
Published : Jul 19, 2025, 02:00 AM IST
ಚಿತ್ರ 18ಬಿಡಿಆರ್55 | Kannada Prabha

ಸಾರಾಂಶ

ಪ್ರಸಕ್ತ ಶೈಕಣಿಕ ವರ್ಷದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಪದವಿಪೂರ್ವ ಕಾಲೇಜುಗಳಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ತರಬೇತಿ ಪಡೆಯುವ 125 ಪುನರಾವರ್ತಿತ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಶಿಷ್ಯವೇತನ ನೀಡಲಿದೆ.

ಕನ್ನಡಪ್ರಭ ವಾರ್ತೆ ಬೀದರ್

ಪ್ರಸಕ್ತ ಶೈಕಣಿಕ ವರ್ಷದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಪದವಿಪೂರ್ವ ಕಾಲೇಜುಗಳಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ತರಬೇತಿ ಪಡೆಯುವ 125 ಪುನರಾವರ್ತಿತ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಶಿಷ್ಯವೇತನ ನೀಡಲಿದೆ.

ನಾರಾಯಣ ಹೃದಯಾಲಯವು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಹಯೋಗದೊಂದಿಗೆ ಸತತ ಮೂರನೇ ವರ್ಷವೂ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡಲು ನಿರ್ಧರಿಸಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದ್ದಾರೆ.

ನಾರಾಯಣ ಹೃದಯಾಲಯ ಒಟ್ಟು 125 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಿದ್ದು, ಈ ಪೈಕಿ 50 ಸ್ಥಾನಗಳನ್ನು ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಉಳಿದ 75 ಸ್ಥಾನಗಳಿಗೆ ದೇಶದ ಎಲ್ಲೆಡೆಯ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದಾಗಿದೆ ಎಂದು ಹೇಳಿದ್ದಾರೆ.

ಶಿಷ್ಯವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ 100 ರಷ್ಟು ವಿನಾಯಿತಿ ಇರಲಿದೆ. 125 ಅಭ್ಯರ್ಥಿಗಳ ಪೈಕಿ 100 ವಿದ್ಯಾರ್ಥಿಗಳಿಗೆ ಬೀದರ್ ಹಾಗೂ 25 ವಿದ್ಯಾರ್ಥಿಗಳಿಗೆ ಕಲಬುರಗಿ ಯಲ್ಲಿ ತರಬೇತಿ ನೀಡಲಾಗುವುದು. ಶಾಹೀನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜತೆಗೂಡಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವರ್ಷದ ನೀಟ್‌ನಲ್ಲಿ 400ಕ್ಕೂ ಅಧಿಕ ಅಂಕ ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು, 350ಕ್ಕೂ ಅಧಿಕ ಅಂಕ ಗಳಿಸಿದ ತೆಲಂಗಾಣದ ಅಭ್ಯರ್ಥಿಗಳು, 475ಕ್ಕೂ ಹೆಚ್ಚು ಅಂಕ ಪಡೆದ ಹಾಗೂ ವಾರ್ಷಿಕ ರೂ. 5 ಲಕ್ಷಕ್ಕೂ ಕಡಿಮೆ ಕುಟುಂಬದ ಆದಾಯ ಹೊಂದಿರುವ ಇತರ ರಾಜ್ಯಗಳ ಅಭ್ಯರ್ಥಿಗಳು ಶಿಷ್ಯವೇತನಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ.

ಶಿಷ್ಯವೇತನಕ್ಕೆ ಹೆಸರು ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. www.shaheengroup.org ನಲ್ಲಿ ಹೆಸರು ನೋಂದಾಯಿಸಬಹುದು. ಮಾಹಿತಿಗೆ ಟೊಲ್ ಫ್ರೀ ಸಂಖ್ಯೆ 18001216235ಗೆ ಸಂಪರ್ಕಿಸಬಹುದು. ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಅಭ್ಯರ್ಥಿಗಳ ಹೆಸರು ನೋಂದಣಿ ಹಾಗೂ ಇತರ ಮಾಹಿತಿಗೆ ಸುರೇಶ ಚನಶೆಟ್ಟಿ (ಬೀದರ್- 9986792323), ವಿಜಯಕುಮಾರ ಪಾಟೀಲ ತೇಗಲತಿಪ್ಪಿ (ಕಲಬುರಗಿ- 9880349025), ಸಿದ್ದಪ್ಪ ಹೊಟ್ಟಿ (ಯಾದಗಿರಿ- 9480957169), ಡಾ. ನಿಷ್ಟಿರುದ್ರಪ್ಪ (ಬಳ್ಳಾರಿ- 9342726398), ಶರಣಗೌಡ ಪೊಲೀಸ್ ಪಾಟೀಲ (ಕೊಪ್ಪಳ- 9741980328) ಅಥವಾ ರಂಗಣ್ಣ ಪಾಟೀಲ (ರಾಯಚೂರು- 8095392296)ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಕನಸು ನನಸಾಗಿಸಲು ನೀಡಲಾಗುತ್ತಿರುವ ಶಿಷ್ಯವೇತನದ ಲಾಭ ಪಡೆಯಬೇಕೆಂದು ಕೋರಿದ್ದಾರೆ.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ