ಮೈಸೂರು : ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧ ಯಾರೋ ಹೇಳಿದರೆಂದು ತನಿಖೆಯನ್ನು ಎಸ್ಐಟಿಗೆ ನೀಡಲಾಗದು. ಪೊಲೀಸರು ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ನೋಡೋಣ. ಅದರ ಆಧಾರದ ಮೇಲೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಈ ಪ್ರಕರಣದಲ್ಲಿ ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ. ಒತ್ತಡ ಬಂದರೂ ನಾವು ಅದಕ್ಕೆ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳ ಪ್ರಕರಣ ಸಂಬಂಧ ಯಾರೋ ಹೇಳಿದರೆಂದ ಮಾತ್ರಕ್ಕೆ ದಿಢೀರನೇ ಎಸ್ಐಟಿ ತನಿಖೆಗೆ ಆದೇಶ ನೀಡಲು ಬರುವುದಿಲ್ಲ. ಎತ್ತು ಕರು ಹಾಕಿತು ಎಂದು ಕೊಟ್ಟಿಗೆ ರೆಡಿ ಮಾಡಲು ಸಾಧ್ಯವೇ? ಇದು ಕೂಡ ಅದೇ ರೀತಿ. ಒಬ್ಬ ವ್ಯಕ್ತಿ ಬಂದು ಸ್ವಇಚ್ಛಾ ಹೇಳಿಕೆ ಕೊಟ್ಟಿದ್ದಾನೆ. ನಾನು ಧರ್ಮಸ್ಥಳದಲ್ಲಿ ಎಷ್ಟೋ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದರು.
ಪೊಲೀಸರು ಏನು ವರದಿ ಕೊಡುತ್ತಾರೆ ನೋಡೋಣ. ಆ ವರದಿಯ ಆಧಾರದ ಮೇಲೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈಗಲೇ ಯಾರೋ ಹೇಳಿದರು ಎಂದು ಏನೇನೊ ಘೋಷಣೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಎಸ್ಐಟಿ ತನಿಖೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಪ್ರಕರಣದ ತನಿಖೆಯ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣದಲ್ಲಿ ನಮ್ಮ ಮೇಲೆ ಯಾರ ಒತ್ತಡ ಇಲ್ಲ. ಒತ್ತಡ ಬಂದರೂ ನಾವು ಅದಕ್ಕೆ ಬಗ್ಗುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಏನಿದು ಪ್ರಕರಣ? .
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿತ್ತು
ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ದೊರೆತ ಕೂಡಲೇ ಅಪರಾಧ ಕೃತ್ಯಗಳನ್ನು ನಡೆಸಿದವರ ಸಂಪೂರ್ಣ ಮಾಹಿತಿ ಹಾಗೂ ತಾನು ಮೃತದೇಹಗಳನ್ನು ವಿಲೇವಾರಿ ಮಾಡಿದ ಸ್ಥಳಗಳನ್ನು ಪೊಲೀಸರಿಗೆ ತೋರಿಸಲು ಸಿದ್ಧನಿರುವುದಾಗಿ ಆ ವ್ಯಕ್ತಿ ತಿಳಿಸಿದ್ದ
ದೂರುದಾರ ವ್ಯಕ್ತಿಯು ಸ್ವತಃ ತಾನೇ ಹೊರತೆಗೆದಿರುವುದಾಗಿ ತಿಳಿಸಿರುವ ಅಸ್ಥಿಪಂಜರದ ಅವಶೇಷಗಳನ್ನು ಹಾಜರುಪಡಿಸಿದ್ದು, ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ದೂರುದಾರರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರು ವಿವರವಾದ ಹೇಳಿಕೆಯನ್ನೂ ನೀಡಿದ್ದಾರೆ
ಈ ಪ್ರಕರಣದ ಕುರಿತು ಎಸ್‌ಐಟಿ ತನಿಖೆಯಾಗಬೇಕು ಎಂಬ ಆಗ್ರಹ ಹಲವರಿಂದ ಕೇಳಿಬಂದಿದೆ.