ರಾಮನಗರ: ಸ್ವಚ್ಛತೆ ಮೂಲಕ ನಗರದ ಆರೋಗ್ಯ ಕಾಪಾಡುತ್ತಿರುವ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುವ ವೇಳೆ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಹೇಳಿದರು.
ಸ್ವಚ್ಛತೆಯ ಮೂಲಕ ನಗರದ ಆರೋಗ್ಯ ಕಾಯುವ ನಿಮ್ಮ ಆರೋಗ್ಯ ಕಾಯುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆದರೆ ಅದನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಬೆಳಿಗ್ಗೆ ವೇಳೆ ನಗರ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಪರಿಶೀಲಿಸಿದ್ದೇವೆ. ಬಹುತೇಕ ಮಂದಿ ಮಾಸ್ಕ್ ಧರಿಸದೆಯೇ ದುರ್ವಾಸನೆಯಲ್ಲಿ ಕೆಲಸ ಮಾಡುತ್ತಾರೆ.
ಇದರಿಂದ ಭವಿಷ್ಯದಲ್ಲಿ ಶ್ವಾಸಕೋಶದ ಸಮಸ್ಯೆಗಳು ಎದುರಾಗುತ್ತವೆ. ವಯಸ್ಸು ಮತ್ತು ದೇಹ ತಡೆಯುತ್ತದೆ ಎಂಬ ಅಸಡ್ಡೆ ಬೇಡ. ಶ್ವಾಸಕೋಶ ದಿನಗಳೆದಂತೆ ವೀಕ್ ಆಗುತ್ತದೆ. ನಮ್ಮ ಆರೋಗ್ಯದ ಜವಾಬ್ದಾರಿ ಮೊದಲು ನಮಗಿರಬೇಕು. ನಾವೇ ನಿರ್ಲಕ್ಷ್ಯ ಮಾಡಿದರೆ ಹೇಗೆ? ಅನಾರೋಗ್ಯಕ್ಕೆ ತುತ್ತಾಗಿ ಅಪಾಯವಾದರೆ, ಮಕ್ಕಳ ಭವಿಷ್ಯದ ಏನಾಗಲಿದೆ? ಎಂಬುದನ್ನು ಅರಿತುಕೊಂಡು ಮುನ್ನೆಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರತಿ ಬಾರಿ ಹೇಳಿಸಿಕೊಳ್ಳವ ಅಗತ್ಯವಿಲ್ಲ. ತಪ್ಪದೆ ಸುರಕ್ಷತಾ ಪರಿಕರಗಳನ್ನು ಧರಿಸಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಶೇಷಾದ್ರಿ ತಿಳಿಸಿದರು.ಪೌರಾಯುಕ್ತ ಡಾ.ಜಯಣ್ಣ ಮಾತನಾಡಿ, ಪೌರಕಾರ್ಮಿಕರ ಆರೋಗ್ಯ ಕಾಯುವ ಹಿನ್ನೆಲೆಯಲ್ಲಿ ಸರ್ಕಾರ ಗಮ್ ಬೂಟ್, ಶೂ, ಮಾಸ್ಕ್, ಜರ್ಕಿನ್, ರಿಫ್ಲೆಕ್ಟರ್‌ಗಳನ್ನು ನೀಡುತ್ತಿದೆ. ಆದರೆ ನೀವುಗಳನ್ನು ಅವುಗಳನ್ನು ಬಳಸುವುದರ ಬಗ್ಗೆ ನಿರ್ಲಕ್ಷ ವಹಿಸುತ್ತಿದ್ದೀರಿ ಎಂದರು.
ಮತ್ತೊಂದು ಪ್ರಕರಣದಲ್ಲಿ ಪೌರಕಾರ್ಮಿಕರೊಬ್ಬರು ಮಾಸ್ಟರ್ ಹೆಲ್ತ್ ಚೆಕಪ್‌ನ ನಂತರ ವೈದ್ಯರು ಸೂಚಿಸಿದ ಸಲಹೆಗಳು, ಔಷದೋಪಚಾರಗಳನ್ನು ಪಾಲಿಸದ ಕಾರಣ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರ ಅನಾರೋಗ್ಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಿರ್ಲಕ್ಷ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜವಾಬ್ದಾರಿಯಿಂದ ಕೆಲಸ ಮಾಡಿ. ಎಲ್ಲ ಪೌರಕಾರ್ಮಿಕರ ಹೆಲ್ತ್ ಕಾರ್ಡ್‌ಗಳು ಚಾಲ್ತಿಯಲ್ಲಿರುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರು, ಲೋಡರ್ಸ್, ಯುಜಿಡಿ ಸಹಾಯಕರು, ಮೇಸ್ತ್ರಿಗಳು, ವಾಹನ ಚಾಲಕರು ಸೇರಿದಂತೆ ಒಟ್ಟು 152 ಜನರಿಗೆ ನಗರಸಭೆ ನಿಧಿ ವತಿಯಿಂದ ಕ್ಯಾನ್ವಸ್ ಶೂಗಳನ್ನು ವಿತರಣೆ ಮಾಡಲಾಯಿತು.
ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಪೌರಕಾರ್ಮಿಕರಿಗೆ ಕ್ಯಾನ್ವಸ್ ಶೂಗಳನ್ನು ವಿತರಿಸಿದರು.