ರಾಮನಗರ: ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ದುಷ್ಟರ ಕೂಟ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇದನ್ನು ಖಂಡಿಸಿ ಆಗಸ್ಟ್ 13ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಧರ್ಮಸ್ಥಳ ಭಕ್ತಾಭಿಮಾನ ವೇದಿಕೆ ಸದಸ್ಯ ಹಾಗೂ ಬಮೂಲ್ ನಿರ್ದೇಶಕ ಹರೀಶ್‌ಕುಮಾರ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ಯಾವುದೇ ದಾಖಲೆಯಿಲ್ಲದೆ ನಿರಂತರವಾಗಿ ಸುಳ್ಳು ಸುದ್ಧಿಗಳನ್ನು ಹರಡಿಸುವುದರಿಂದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಜೊತೆಗೆ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಭಂಗಕ್ಕೆ ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸಹ ಶ್ರೀ ಕ್ಷೇತ್ರದ ಪರಮ ಭಕ್ತನಾಗಿದ್ದು ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮುಸುಕುದಾರಿ ವ್ಯಕ್ತಿಯ ದೂರಿನ ಆಧಾರದ ಮೇಲೆ ಪೊಲೀಸರು ಸ್ಥಳ ಪರಿಶೀಲನೆ ಸೋಗಿನಲ್ಲಿ ಸಮಯ ವ್ಯರ್ಥವಾಗುತ್ತಿದೆ. ಅಲ್ಲದೆ ಸರ್ಕಾರದ ಹಣ ಸಹ ಪೋಲು ಮಾಡುತ್ತಿದ್ದಾರೆ. ಇದೀಗ ಬಾಹುಬಲಿ ಬೆಟ್ಟದ ಸ್ಥಳವನ್ನು ಗುರುತಿಸುವ ಮೂಲಕ ದಿನಕ್ಕೊಂದು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಟೀಕಿಸಿದರು.ಅಪಪ್ರಚಾರ ಮಾಡುತ್ತಿರುವವರ ಹಿನ್ನೆಲೆ, ಅವರಿಗೆ ಹಣಕಾಸಿನ ನೆರವು ನೀಡುತ್ತಿರುವವರು ಯಾರು ಎಂಬುದನ್ನು ತನಿಖೆ ಮಾಡಬೇಕಿದೆ. ಅಲ್ಲದೆ, ಮುಸುಕುದಾರಿ ವ್ಯಕ್ತಿಯನ್ನು ಮಂಪರು ಪರೀಕ್ಷೆಗೆ ಒಳ ಪಡಿಸಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಪೋಲೀಸ್ ಠಾಣೆಯಲ್ಲಿ ಅನಾಮದೇಯ ಹೆಣವನ್ನು ಹೂಳಿರುವ ಸಂಖ್ಯೆ ಇರುತ್ತದೆ. ಮುಸುಕು ದಾರಿ ಸ್ಥಳ ತೋರಿ ಹೀರೋ ಆಗಲು ಹೊರಟಿದ್ದಾರೆ ಎಂದು ಹರೀಶ್ ಕುಮಾರ್ ಕಿಡಿಕಾರಿದರು.
ಸಮಾಜ ಸೇವಕ ಚನ್ನಪಟ್ಟಣದ ರವಿಕುಮಾರ್‌ಗೌಡ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ರಕ್ಷಣೆಗೆ ಭಕ್ತರಾದ ನಾವು ಸಿದ್ದರಿದ್ದೇವೆ. ಅನಾಮಿಕ ವ್ಯಕ್ತಿಯನ್ನು ಕೂಡಲೇ ಮಂಪರು ಪರೀಕ್ಷೆ ಮಾಡಿಸಿ ಆತನ ವಿರುದ್ದ ಕ್ರಮ ವಹಿಸಬೇಕು.ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
11ಕೆಆರ್ ಎಂಎನ್ 1.ಜೆಪಿಜಿ