
ಕನ್ನಡಪ್ರಭ ವಾರ್ತೆ ಕೋಲಾರರಾಜಧಾನಿ ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲೇ ಇದ್ದರೂ ಅಭಿವೃದ್ದಿಯಲ್ಲಿ ಮಾತ್ರ ಜಿಲ್ಲಾ ಕೇಂದ್ರ ಕೋಲಾರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಅಷ್ಟೇ ಅಲ್ಲದೆ ಅಲ್ಲಿನ ಅಧಿಕಾರಿಗಳ ನಿರ್ಲ್ಯಕ್ಷದಿಂದಾಗಿ ನಗರಸಭೆಯ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯ ಸಂಬಳಕ್ಕೂ ಹಣವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.ಜಿಲ್ಲಾ ಕೇಂದ್ರ ಕೋಲಾರದ ಪ್ರಮುಖ ರಸ್ತೆಗಳಲ್ಲಿ ಕಸ ಸಂಗ್ರಹಿಸುತ್ತಿರುವ ಪೌರಕಾರ್ಮಿಕರು, ರಸ್ತೆಗಳನ್ನು ಸ್ವಚ್ಛಗೊಳಿಸಿ, ಬದಿಯಲ್ಲಿನ ಕಸದ ರಾಶಿಯನ್ನು ತೆಗೆದು ನಗರವನ್ನು ಸ್ವಚ್ಛವಾಗಿಡುವ ಕಾರ್ಯವನ್ನು ದಿನನಿತ್ಯವೂ ಮಾಡುತ್ತಾರೆ. 8 ತಿಂಗಳಿಂದ ಸಂಬಳ ಇಲ್ಲ
ಇದರಿಂದ ಕಳೆದ ೭ ತಿಂಗಳಿನಿಂದ ಪೌರಕಾರ್ಮಿಕರು ಪರದಾಡುವ ಸ್ಥಿತಿ ಎದುರಾಗಿದೆ, ಆದರೂ ಸಹ ಸರ್ಕಾರದ ವಿರುದ್ಧ, ಅಧಿಕಾರಿಗಳ ವಿರುದ್ದ ಮಾತನಾಡದೆ, ಪ್ರತಿನಿತ್ಯ ಕೆಲಸ ಮಾಡಿ ನಗರದಲ್ಲಿ ಸ್ವಚ್ಛತಾ ಕಾರ್ಯವನ್ನು ಮುಂದುರಿಸಿದ್ದಾರೆ. ಕೆಲವು ಸಿಬ್ಬಂದಿಗಳಿಗೆ ಮೂರು ತಿಂಗಳು, ಇನ್ನು ಕೆಲವು ಸಿಬ್ಬಂದಿಗಳಿಗೆ ನಾಲ್ಕು ತಿಂಗಳು, ಇನ್ನು ಕೆಲವು ಪೌರಕಾರ್ಮಿಕರಿಗೆ ಏಳು ತಿಂಗಳು ವೇತನ ಬಾಕಿ ಇದೆ. ಆದಷ್ಟು ಬಾಕಿ ಇರುವ ವೇತನವನ್ನು ನೀಡಲು ಪ್ರಯತ್ನಿಸಲಾಗುತ್ತಿದೆ ಅನ್ನೋದು ನಗರಸಭೆ ಆಯುಕ್ತ ನವೀನ್‌ಚಂದ್ರರ ಮಾತಾಗಿದೆ.
130 ಪೌರಕಾರ್ಮಿಕರ ಪರದಾಟಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೩೫ ವಾರ್ಡುಗಳಿವೆ ಈ ಪೈಕಿ ಒಟ್ಟು ೧೩೦ ಕ್ಕೂ ಹೆಚ್ಚು ಜನ ಪೌರಕಾರ್ಮಿಕರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪೌರಕಾರ್ಮಿಕರು ನಿತ್ಯ ಕಸ ಸಂಗ್ರಹ, ಬೀದಿ ಗುಡಿಸುವುದು, ವಾರ್ಡ್ಗಳಿಗೆ ನೀರು ಪೂರೈಕೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದರೆ ಮಾತ್ರವೇ ನಗರದಲ್ಲಿ ಜನರು ನೆಮ್ಮದಿಯಾಗಿರಲು ಸಾಧ್ಯ. ಒಂದು ದಿನ ಕಸ ಸಂಗ್ರಹ ಮಾಡದೆ ಹೋದರೆ ಇಡೀ ನಗರವೇ ಕಸದ ರಾಶಿಯಿಂದ ತುಂಬಿ ತುಳುಕುವ ಸ್ಥಿತಿಗೆ ಬರುತ್ತದೆ. ತಿಂಗಳಿಗೆ ಬೇಕು ₹25 ಲಕ್ಷ
ಒಟ್ಟಿನಲ್ಲಿ ಕೋಲಾರ ನಗರಸಭೆಯಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಿ ಆಗುತ್ತಿಲ್ಲ. ಅಲ್ಲದೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನಗಳು ಬಾರದ ಪರಿಣಾಮ ನಗರಸಭೆಯ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಬಾಕಿ ವೇತನ ಪಾವತಿಸುವಂತೆ ಪೌರಕಾರ್ಮಿಕರು ಒತ್ತಾಯಿಸಿದ್ದಾರೆ.