ಜನರ ಅಲೆದಾಟ ತಪ್ಪಿಸಲು ಪ್ರಜಾಸೇವೆ ಆಂದೋಲನ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork |  
Published : Sep 18, 2026, 02:15 AM IST
17ಎಚ್.ಎಲ್.ವೈ-1(ಎ): ತಾಲೂಕಿನ ಮುರ್ಕವಾಡ ಗ್ರಾಮದ ಶ್ರೀ ಸಿದ್ಧಾರೂಡ ಮಠ, ಶ್ರೀ ನಿತ್ಯಾನಂದಾಶ್ರಮದ ಸಭಾಂಗಣದಲ್ಲಿ ಆಯೋಜಿಸಿದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. | Kannada Prabha

ಸಾರಾಂಶ

ಪ್ರಜಾಸೇವೆ ಆಂದೋಲನವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮಹತ್ವಾಕಾಂಕ್ಷೆಯ ಜನಪರ ಕಾರ್ಯಕ್ರಮ. ಅವರ ಕಲ್ಪನೆಯ ಕೂಸು.

ಹಳಿಯಾಳ: ಜನಸಾಮಾನ್ಯರು ಸಣ್ಣಪುಟ್ಟ ಕೆಲಸಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಸಾರ್ವಜನಿಕರ ಕೆಲಸಗಳು ವಿಳಂಬವಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಪ್ರಜಾಸೇವೆ ಆಂದೋಲನವನ್ನು ಜಾರಿಗೊಳಿಸಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಗುರುವಾರ ತಾಲೂಕಿನ ಮುರ್ಕವಾಡ ಗ್ರಾಮದ ಸಿದ್ಧಾರೂಢ ಮಠ, ನಿತ್ಯಾನಂದಾಶ್ರಮದ ಸಭಾಂಗಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಮಾತನಾಡಿ, ಪ್ರಜಾಸೇವೆ ಆಂದೋಲನವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮಹತ್ವಾಕಾಂಕ್ಷೆಯ ಜನಪರ ಕಾರ್ಯಕ್ರಮ. ಅವರ ಕಲ್ಪನೆಯ ಕೂಸು ಎಂದರು.

ಅಧಿಕಾರಿ ವರ್ಗದಲ್ಲಿ ಜನಪರ ಕಾಳಜಿಯ ಕೊರತೆಯನ್ನು ಕಾಣುತ್ತಿದ್ದೇವೆ. ಮೇಲಾಗಿ ಇಲಾಖೆಗಳ ಮಧ್ಯೆ ಸಮನ್ವಯ ಇಲ್ಲವಾಗಿದೆ. ಇದರಿಂದಾಗಿ ಸಾರ್ವಜನಿಕರ ಕೆಲಸಗಳು ನಿಗದಿತ ಸಮಯಕ್ಕೆ ಆಗುತ್ತಿಲ್ಲ. ನಿಗದಿತ ಅವಧಿಯಲ್ಲಿ ಜನರ ಸಮಸ್ಯೆ, ಕಷ್ಟಗಳಿಗೆ ಸ್ಪಂದಿಸದಿದ್ದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಬಡವರು, ಶೋಷಿತರು, ದಲಿತರು, ಹಿಂದುಳಿದ ವರ್ಗದವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರ ಕಷ್ಟಗಳನ್ನು ಪರಿಹರಿಸುವ ಅಧಿಕಾರ ಶಕ್ತಿಯು ನಿಮಗೆ ಇದೆ. ನೀವೆಲ್ಲ ಭಾಗ್ಯವಂತರೆಂಬುದನ್ನು ಅಧಿಕಾರಿಗಳು ಮರೆಯಬಾರದು ಎಂದರು.

60ಕ್ಕೂ ಹೆಚ್ಚು ಅರ್ಜಿ: ಸಭೆಯಲ್ಲಿ ಹೋಬಳಿ ಮಟ್ಟದಲ್ಲಿ 60ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಅರ್ಜಿದಾರರನ್ನು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳನ್ನು ವೇದಿಕೆಯ ಬಳಿ ಕರೆಸಿ ಶಾಸಕರು ಸ್ಥಳದಲ್ಲಿಯೇ ಹಲವಾರು ಸಮಸ್ಯೆಗಳನ್ನು ಇತ್ಯರ್ಥಗೊಳಿಸಿದರು.

ಬೆಳವಟಗಿ ಗ್ರಾಮಸ್ಥರು, ಗ್ರಾಮದಲ್ಲಿ ಮಂಗಗಳ ಕಾಟವಿದ್ದು, ಮಂಗಗಳ ಗುಂಪು ಬೆಳೆಯನ್ನು ಹಾಳು ಮಾಡುತ್ತಿದೆ ಎಂದು ಸಮಸ್ಯೆಯನ್ನು ಪ್ರಸ್ತಾಪಿಸಿದರು. ಗುಳೇದಕೊಪ್ಪ ಗ್ರಾಮಸ್ಥರು ಗ್ರಾಮದ 15 ಎಕರೆ ಗಾಂವಠಾಣ ಜಮೀನು ಅಕ್ರಮ ಸಾಗುವಳಿ ನಡೆದಿರುವುದನ್ನು ನಿಲ್ಲಿಸಬೇಕೆಂದು ಮನವಿ ಸಲ್ಲಿಸಿದರು. ಪಡಿತರ ಚೀಟಿ, ರಸ್ತೆ ನಿರ್ಮಾಣ, ಭೂಮಾಪನಾ ಇಲಾಖೆಯಿಂದ ಆಗುತ್ತಿರುವ ಅನಗತ್ಯ ವಿಳಂಬ, ಕೋರಿಕೆಯ ವಾಹನ ನಿಲುಗಡೆ, ಆಶ್ರಯ ಮನೆಗಳ ಕೋರಿ ಅರ್ಜಿಗಳು ಸಲ್ಲಿಕೆಯಾದವು.

ಸೆ. 5ರಂದು ಸಾಂಬ್ರಾಣಿಯಲ್ಲಿ ನಡೆದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಪ್ರಜಾಸೇವೆ ಆಂದೋಲನ ಉದ್ಘಾಟನಾ ಸಭೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ, ಅದರಲ್ಲಿ ಅರ್ಹ 8 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರವನ್ನು ಶಾಸಕರು ನೀಡಿದರು.

ಸಹಾಯಕ ಆಯುಕ್ತೆ ಐಎಎಸ್ ಅಧಿಕಾರಿ ರಮ್ಯಾ ಆರ್. ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ್, ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಹಳಿಯಾಳ ಎಸಿಎಫ್ ವರದ ರಂಗನಾಥ ಜಿ.ಎಚ್., ಸಿಪಿಐ ಭೀಮಣ್ಣ ಸೂರಿ ಇದ್ದರು. ತಾಲೂಕಿನ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆತ್ಮಾವಲೋಕನ ಅಗತ್ಯ
ಕೆಕೆಆರ್‌ ಡಿ ಬಿ ಅನುದಾನದಿಂದ ಸಾಕಷ್ಟು ಅಭಿವೃದ್ಧಿ