ಕೆಕೆಆರ್‌ ಡಿ ಬಿ ಅನುದಾನದಿಂದ ಸಾಕಷ್ಟು ಅಭಿವೃದ್ಧಿ

KannadaprabhaNewsNetwork |  
Published : Sep 18, 2026, 02:15 AM IST
ಹರಪನಹಳ್ಳಿಯ ತಾಲೂಕು ಆಡಳಿತ ಸೌಧದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿದರು. ಎಸಿ ಸುರೇಶಕುಮಾರ, ಎಂ.ವಿ.ಅಂಜಿನಪ್ಪ, ತಹಶೀಲ್ದಾರ ಬಿ.ವಿ.ಗಿರೀಶಬಾಬು ಇತರರು ಇದ್ದರು. | Kannada Prabha

ಸಾರಾಂಶ

ನಮ್ಮ ಭಾಗಕ್ಕೆ ಈ ದಿನ ಎರಡನೇ ಸ್ವಾತಂತ್ರ್ಯ ಇದ್ದಂತೆ ಆದ್ದರಿಂದ ಮುಂದಿನ ಬಾರಿ ಈ ಕಾರ್ಯಕ್ರಮವನ್ನು ಸ್ಡೇಡಿಯಂನಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಬೇಕು

ಹರಪನಹಳ್ಳಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಹರಪನಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದ್ದಾರೆ.

ಅವರು ಪಟ್ಟಣದ ತಾಲೂಕು ಸೌಧದಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.

ಹರಪನಹಳ್ಳಿ ತಾಲೂಕನ್ನು ದಿ.ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್‌ ರವರ ಒತ್ತಾಸೆ ಮೇರೆಗೆ ನಮ್ಮ ತಂದೆ ಎಂ.ಪಿ. ಪ್ರಕಾಶ ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಳಿಸಿದ್ದರು, ಇತ್ತೀಚೆಗೆ ನಮ್ಮ ಸಹೋದರ ದಿ.ಮಾಜಿ ಶಾಸಕ ಎಂ.ಪಿ. ರವೀಂದ್ರ ಶಾಸಕರಾಗಿದ್ದಾಗ ಹರಪನಹಳ್ಳಿಯನ್ನು ದಾವಣಗೆರೆಯಿಂದ ಪುನಃ ಬಳ್ಳಾರಿಗೆ ಸೇರ್ಪಡೆಗೊಳಿಸಿ 371 ಜೆ ಸೌಲಭ್ಯ ಸಿಗುವ ಹಾಗೇ ಮಾಡಿದರು.

ನಾನು ಶಾಸಕಿಯಾಗಿ 371ಜೆ ಸೌಲಭ್ಯದಡಿ ಕೆಕೆಆರ್ ಡಿಬಿಯಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ ಎಂದು ಹೇಳಿದರು.

ನಮ್ಮ ಭಾಗಕ್ಕೆ ಈ ದಿನ ಎರಡನೇ ಸ್ವಾತಂತ್ರ್ಯ ಇದ್ದಂತೆ ಆದ್ದರಿಂದ ಮುಂದಿನ ಬಾರಿ ಈ ಕಾರ್ಯಕ್ರಮವನ್ನು ಸ್ಡೇಡಿಯಂನಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಬೇಕು ಎಂದು ತಾಲೂಕಾಡಳಿತಕ್ಕೆ ಸೂಚಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಹರಪನಹಳ್ಳಿ ತಾಲೂಕು ದಾವಣಗೆರೆ ಜಿಲ್ಲೆಯಲ್ಲಿದ್ದುಕೊಂಡು ಉದ್ಯೋಗ, ಶಿಕ್ಷಣ ಸೇರಿದಂತೆ ಅಭಿವೃದ್ಧಿಯಿಂದ ವಂಚಿತಗೊಂಡಿತ್ತು, ದಿ.ಎಂ.ಪಿ. ರವೀಂದ್ರ ಶಾಸಕರಾಗಿದ್ದ ಸಂದರ್ಭದಲ್ಲಿ ಹರಪನಹಳ್ಳಿಯನ್ನು ವಾಪಸ್‌ ಬಳ್ಳಾರಿ ಜಿಲ್ಲೆಗೆ ಸೇರಿಸಿ ಜನರಿಗೆ ಅನುಕೂಲ ಮಾಡಿದರು, ಇಂದು ಸಾಕಷ್ಟು ಅನುದಾನ ಬರುತ್ತಲಿದೆ ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಟಿ.ಸುರೇಶಕುಮಾರ, 7 ಜಿಲ್ಲೆಗಳು ನಿಜಾಮರಿಂದ ವಿಮೋಚನೆಗೊಂಡ ಬಳಿಕ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಗಿ ಸಾಕಷ್ಟು ಅಭಿವೃದ್ಧಿಯಾದವು, ಈವರೆಗೂ ₹20 ಸಾವಿರ ಕೋಟಿ ಅನುದಾನ 7 ಜಿಲ್ಲೆಗಳಿಗೆ ಬಂದಿದೆ ಎಂದು ಹೇಳಿದರು.

ಸಾಹಿತಿ ಇಸ್ಮಾಯಿಲ್‌ ಯಲಿಗಾರ ಉಪನ್ಯಾಸ ನೀಡಿ, ಸ್ವಾತಂತ್ರ್ಯ ಬಂದ ಮೇಲೆ ಭಾರತದ ಒಕ್ಕೂಟ ಸೇರುವುದಿಲ್ಲ ಎಂದು ಹೇಳಿದ ಹೈದ್ರಾಬಾದ್‌ ನಿಜಾಮನ ವಿರುದ್ಧ ಈ ಭಾಗದ ಜನತೆ ಹೋರಾಟಕ್ಕಿಳಿದರು, ಸಾವಿರಾರು ಜನರು ತ್ಯಾಗ, ಬಲಿದಾನ ಮಾಡಿದಾಗಸರ್ದಾರ್ ವಲ್ಲಭಭಾಯಿ ಪಟೇಲ್ ಕಠಿಣ ನಿರ್ಧಾರದಿಂದ ಕಲ್ಯಾಣ ಕರ್ನಾಟಕ ನಿಜಾಮರಿಂದ ವಿಮೋಚನೆಗೊಂಡಿತು ಎಂದು ಹೇಳಿದರು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ವೈ.ಎಚ್.ಚಂದ್ರಶೇಖರ ಮಾತನಾಡಿ, ದಾವಣಗೆರೆ ಜಿಲ್ಲೆಯಿಂದ ವಾಪಸ್‌ ಬಳ್ಳಾರಿ ಜಿಲ್ಲೆಗೆ ಸೇರಿಸಿ ಹರಪನಹಳ್ಳಿಗೆ 371ಸೌಲಭ್ಯ ಕೊಡಿಸಿದ ದಿ. ಮಾಜಿ ಶಾಸಕ ಎಂ.ಪಿ.ರವೀಂದ್ರ ಹರಪನಹಳ್ಳಿಯ ವಲ್ಲಭಭಾಯಿ ಪಟೇಲ್‌ ಎಂದು ಬಣ್ಣಿಸಿದರು.

ತಹಸೀಲ್ದಾರ ಬಿ.ವಿ.ಗಿರೀಶಬಾಬು, ಸಿಪಿಐ ಮಹಾಂತೇಶ ಸಜ್ಜನ್, ಬಿಇಒ ಲೇಪಾಕ್ಷಪ್ಪ, ಅಬ್ದುಲ್‌ ರಹಿಮಾನ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಉದಯಶಂಕರ, ಲಾಟಿದಾದಾಪೀರ, ಎಚ್. ವಸಂತಪ್ಪ, ಗುಡಿ ನಾಗರಾಜ, ಡಿಎಸ್ ಎಸ್‌ನ ಸುಬಾಸ್‌ , ಪಿಎಸ್‌ ಐ ಶಂಬುಲಿಂಗ ಹಿರೇಮಠ, ಗುಡಿ ನಾಗರಾಜ, ಎಡಿಎಲ್‌ ಆರ್‌ ವೆಂಕಟೇಶ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಅಲೆದಾಟ ತಪ್ಪಿಸಲು ಪ್ರಜಾಸೇವೆ ಆಂದೋಲನ: ಶಾಸಕ ಆರ್.ವಿ. ದೇಶಪಾಂಡೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆತ್ಮಾವಲೋಕನ ಅಗತ್ಯ