ಕಂಪ್ಲಿ: ವಿಶ್ವಕರ್ಮ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ವಿಶ್ವಕರ್ಮ ಸಮಾಜದ ತಾಲೂಕು ಕಾರ್ಯದರ್ಶಿ ಡಿ.ಮೌನೇಶ್ ಒತ್ತಾಯಿಸಿದರು.
ಕಟ್ಟಡ ನಿರ್ಮಾಣ, ಶಿಲ್ಪಕಲೆ, ಮರಗೆಲಸ, ಲೋಹಕಲೆ ಸೇರಿದಂತೆ ವಿವಿಧ ಕಲೆ ಮತ್ತು ವೃತ್ತಿಗಳಲ್ಲಿ ವಿಶ್ವಕರ್ಮ ಸಮುದಾಯದವರು ಪರಿಣತಿ ಹೊಂದಿದ್ದಾರೆ. ದೇವಾಲಯ, ವಿಗ್ರಹಗಳು, ಕಲಾಕೃತಿಗಳು ಹಾಗೂ ವಿವಿಧ ಸ್ಮಾರಕಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಕಾಷ್ಟ, ಶಿಲ್ಪ ಮತ್ತು ಲೋಹ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಲಾಕೃತಿ ನಿರ್ಮಿಸುವ ಅಪೂರ್ವ ಕೌಶಲ ಹೊಂದಿದ್ದರೂ ಸಮುದಾಯದ ಅನೇಕ ಕುಟುಂಬಗಳು ಇಂದಿಗೂ ಆರ್ಥಿಕವಾಗಿ ಹಿಂದುಳಿದಿವೆ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಮುನ್ನಡೆಯಲು ವಿಶ್ವಕರ್ಮ ಸಮುದಾಯದ ಯುವಜನರಿಗೆ ತರಬೇತಿ, ಆರ್ಥಿಕ ನೆರವು, ಸಾಲ ಸೌಲಭ್ಯ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವಂತಹ ಯೋಜನೆಗಳ ಅಗತ್ಯವಿದೆ. ಸರ್ಕಾರ ರೂಪಿಸುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪುವಂತಾಗಬೇಕು ಎಂದು ಒತ್ತಾಯಿಸಿದರು.ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ವಿಶ್ವಕರ್ಮ ಸಮುದಾಯವು ಕಲೆ ಮತ್ತು ಕೌಶಲ್ಯದ ಮೂಲಕ ಸಮಾಜದ ಪ್ರಗತಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ. ಶಿಲ್ಪ ನಿರ್ಮಾಣದ ಪರಂಪರೆ ಆರಂಭಿಸಿ ಅದನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಬಂದಿರುವ ವಿಶ್ವಕರ್ಮರ ಕಲೆ ಮತ್ತು ಕೌಶಲ್ಯ ಶ್ಲಾಘನೀಯವಾಗಿದೆ ಎಂದರು.
ವಿವಿಧೆಡೆ ಜಯಂತಿ ಆಚರಣೆ
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಮಹಿಳಾ ಅಧ್ಯಕ್ಷೆ ಡಿ. ವೀಣಾ, ರಾಮಚಂದ್ರಾಚಾರ್, ಚಂದ್ರಶೇಖರಾಚಾರ್, ಎಂ. ಮಂಜುನಾಥಾಚಾರ್, ಡಿ. ಕಾಳಾಚಾರ್, ಸವಿತಾ, ಡಿ. ರಾಘವೇಂದ್ರ, ಕೆ.ರಾಘವೇಂದ್ರ, ಎ.ಮೌನೇಶ್, ಡಿ. ವಿಜಯಕುಮಾರ್, ಗುರುರಾಜಾಚಾರ್, ಡಿ.ನಾರಾಯಣಾಚಾರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.