ಕನಕಗಿರಿ ಪಟ್ಟಣದ ಕೆಪಿಎಸ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ೭೯ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಗಾಳಿ ಧ್ವಜಾರೋಹಣ ನೆರವೇರಿಸಿದರು.
ಕನಕಗಿರಿ: ಜಗಜ್ಯೋತಿ ಬಸವೇಶ್ವರರ "ಕಾಯಕವೇ ಕೈಲಾಸ'''''''' ತತ್ವವನ್ನು ಅಧಿಕಾರಿಗಳು ಅನುಸರಿಸಿದಾಗ ಮಾತ್ರ ಜನರ ಆಶೋತ್ತರಗಳು ಈಡೇರಲಿವೆ ಎಂದು ತಹಸೀಲ್ದಾರ್ ಚಂದ್ರಶೇಖರ ಗಾಳಿ ಹೇಳಿದರು.
ಪಟ್ಟಣದ ಕೆಪಿಎಸ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ೭೯ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳು ಅಭಿವೃದ್ಧಿಗೆ ಸರ್ಕಾರ ಪ್ರತಿ ವರ್ಷ ₹೫ ಸಾವಿರ ಕೋಟಿ ನೀಡುತ್ತಿದೆ. ರಸ್ತೆ, ವಿವಿಧ ಇಲಾಖೆಗಳ ಹೊಸ ಕಟ್ಟಡಗಳು, ಮೂಲ ಸೌಕರ್ಯ ಅಭಿವೃದ್ಧಿ, ಕೆಕೆಆರ್‌ಟಿಸಿ ಬಸ್ಸುಗಳ ಖರೀದಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ೩೭೧ಜೆ ಕಲಂ ಈ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರಿ ಪಡೆಯಲು ಅನುಕೂಲವಾಗಿದೆ ಎಂದರು.
ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಮಾತನಾಡಿ, ಕನಕಗಿರಿ ತಾಲೂಕಿನ ಜಯತೀರ್ಥ ರಾಜಪುರೋಹಿತ, ಮಾಕಣ್ಣ ಕಂಬಳಿ, ವೆಂಕೋಬ ಆಚಾರ್ ಜೋಶಿ, ನರಸಿಂಹ ಆಚಾರ್, ಮರಿಯಪ್ಪ ಭತ್ತದ, ಪಂಪನಗೌಡ ಮಾಲಿ ಪಾಟೀಲರು ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವುದು ಹಾಗೂ ರಾಷ್ಟ್ರಧ್ವಜ ಹಾರಿಸುವ ಮೂಲಕ ಹೈ-ಕ ವಿಮೋಚನೆಗಾಗಿ ಕೈಗೊಂಡಿರುವ ಹೋರಾಟಗಳ ನೆನಪುಗಳನ್ನು ಮೆಲುಕು ಹಾಕಿದರು.
ಅಧಿಕಾರಿಗಳು ಹಾಗೂ ಸಿಬ್ಬಂದಿ ರಕ್ತದಾನ ಮಾಡಿದರು. ಕಲ್ಯಾಣ ಕರ್ನಾಟಕ ಪಬ್ಲಿಕೇಷನ್ಸ್ ವತಿಯಿಂದ "ಹೈದರಾಬಾದ್ ವಿಮೋಚನೆಯ ಸುತ್ತಮುತ್ತ " ಎಂಬ ಕನಕಗಿರಿಯ ಹಿರಿಯ ಪತ್ರಕರ್ತ ವಿಜಯಕುಮಾರ ಅವರ ಬರೆದ ಕೈಪಿಡಿ ಬಿಡುಗಡೆಗೊಳಿಸಲಾಯಿತು.
ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪಿಐ ವೀರಣ್ಣ ಹಳ್ಳಿ, ತಾಪಂ ಇಒ/ಪಪಂ ಮುಖ್ಯಾಧಿಕಾರಿ (ಪ್ರಭಾರಿ) ಕೆ. ರಾಜಶೇಖರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯಲಕ್ಷ್ಮೀ ಹಿರೇಮಠ, ಪತ್ರಾಂಕಿತ ಖಜನಾಧಿಕಾರಿ ದುರ್ಗಾಸಿಂಗ್, ಶಿಕ್ಷಣ ಇಲಾಖೆಯ ಇಸಿಒ ಶ್ರೀಕಾಂತ, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಹಜರತ್ ಹುಸೇನ, ಪಪಂ ಸದಸ್ಯ ಶೇಷಪ್ಪ ಪೂಜಾರ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್ ಇದ್ದರು.
ವಂದೇ ಮಾತರಂ ಪೂರ್ಣ ಗೀತೆ: ವಂದೇ ಮಾತರಂ ಗೀತೆ ಪೂರ್ಣ ಹಾಡುವ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವಿನ ತೀವ್ರ ತಿಕ್ಕಾಟದ ನಡುವೆಯೂ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಧ್ವಜಾರೋಹಣ ಸಮರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮ ಆರಂಭ ಹಾಗೂ ಮುಕ್ತಾಯದ ವೇಳೆ ಗೀತೆಯನ್ನು ಪೂರ್ಣವಾಗಿ ಹಾಡಿ, ಗೌರವ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.