ಬೇಡ್ತಿ ವರದಾ ನದಿ ತಿರುವು ಯೋಜನೆ ವಿರೋಧಿಸಿ ನವೆಂಬರ್ 3ರಂದು ರಸ್ತಾರೋಖೋ ಚಳವಳಿ

KannadaprabhaNewsNetwork |  
Published : Sep 18, 2026, 02:15 AM IST
ಸಭೆಯಲ್ಲಿ ಅನಂತ ಹೆಗಡೆ ಅಶೀಸರ ಮಾತನಾಡಿದರು. | Kannada Prabha

ಸಾರಾಂಶ

ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನದಿ ಜೋಡಣೆ ಮತ್ತು ಪರಿಸರ ರಕ್ಷಣೆ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಸಿದೆ. ಆದರೂ ಸರ್ಕಾರ ಹೊಸ ಹೊಸ ಯೋಜನೆಯ ಪ್ರಸ್ತಾವನೆ ಸಲ್ಲಿಸುತ್ತಿದೆ.

ಯಲ್ಲಾಪುರ: ಬೇಡ್ತಿ- ವರದಾ ನದಿ ತಿರುವು ಯೋಜನೆ ವಿರೋಧಿಸಿ ಅ. ೧೦ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಮತ್ತು ನ. ೩ರಂದು ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತಾರೋಖೋ ಚಳವಳಿಯನ್ನು ನಡೆಸಲು ಸಮಿತಿ ತೀರ್ಮಾನಿಸಿದೆ ಎಂದು ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ಅನಂತ ಹೆಗಡೆ ಅಶೀಸರ ಪ್ರಕಟಿಸಿದರು.

ಗುರುವಾರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ವಿವಿಧ ಸಮಿತಿಗಳ, ಪ್ರಮುಖರ, ಸಾರ್ವಜನಿಕರ ಸಭೆಯ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಬೇಡ್ತಿ- ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನದಿ ಜೋಡಣೆ ಮತ್ತು ಪರಿಸರ ರಕ್ಷಣೆ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಸಿದೆ. ಆದರೂ ಸರ್ಕಾರ ಹೊಸ ಹೊಸ ಯೋಜನೆಯ ಪ್ರಸ್ತಾವನೆ ಸಲ್ಲಿಸುತ್ತಿದೆ ಎಂದರು.

ನ. ೩ರಂದು ನಡೆಯುವ ರಸ್ತಾರೋಖೋ ಚಳವಳಿಯಲ್ಲಿ ಎಲ್ಲ ಸಮುದಾಯಗಳ ಮತ್ತು ಯುವಜನಾಂಗವೂ ಸೇರಿದಂತೆ ೧೦ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರುವಂತೆ ಪ್ರಬಲ ಸಂಘಟನೆ ನಡೆಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ವರದಾ ಬೇಡ್ತಿ ಯೋಜನೆ ತ್ವರಿತಗತಿಯಲ್ಲಿ ಜಾರಿಗೆ ತರುವಲ್ಲಿ ಸರ್ಕಾರ ಮುಂದಾಗಿದೆ. ನಾವು ಪ್ರಬಲವಾಗಿ ಹೋರಾಟ ಮಾಡಬೇಕು. ಅಲ್ಲದೇ ನಮ್ಮ ಹೋರಾಟದಲ್ಲಿ ಭಾಗವಹಿಸಿದ ಯಾವುದಾದರೂ ವ್ಯಕ್ತಿಗೆ ಅನಾನುಕೂಲತೆ, ತೊಂದರೆ ಆದಲ್ಲಿ ಸಮಿತಿಯವರೇ ಅವರ ಬೆನ್ನಿಗೆ ನಿಂತು ಸಹಾಯ ಮಾಡಬೇಕು. ಇದು ಅತ್ಯಂತ ಮಹತ್ವದ್ದಾಗಿದೆ. ಅಂದಾಗ ಮಾತ್ರ ಜನರು ಈ ಹೋರಾಟಕ್ಕೆ ಬರುತ್ತಾರೆ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ನಮ್ಮ ಹೋರಾಟ ಯಶಸ್ವಿಯಾಗಬೇಕಾದರೆ ಕೇಂದ್ರ ಸರ್ಕಾರದವರೆಗೂ ಹೋರಾಟದ ಬಿಸಿ ತಾಗಬೇಕೆಂದರೆ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು, ಯುವಜನರನ್ನು ಸಂಪರ್ಕಿಸಿ ಬೃಹತ್ ಪ್ರಮಾಣದಲ್ಲಿ ಯುವಶಕ್ತಿ ಮೊಳಗುವಂತೆ ಮಾಡಿದಾಗ ಮಾತ್ರ ಈ ಹೋರಾಟಕ್ಕೆ ಶಕ್ತಿ ಬರುತ್ತದೆ. ಕೇಂದ್ರದವರೆಗೂ ಬಿಸಿ ತಗುಲುತ್ತದೆ. ಈ ಕುರಿತು ಸಮಿತಿ ಚಿಂತನೆ ನಡೆಸಬೇಕು ಎಂದರು.

ಸಭೆಯಲ್ಲಿ ಪ್ರಮುಖರಾದ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ರಾಘವೇಂದ್ರ ಭಟ್ಟ ಹಾಸಣಗಿ, ದೀಪಕ್ ದೊಡ್ಡೂರು, ವಿಶ್ವನಾಥ ಹೆಗಡೆ ಶೀಗೇಹಳ್ಳಿ, ರಮೇಶ ದುಬಾಷಿ ಶಿರಸಿ, ವೆಂಕಟ್ರಮಣ ಕಿರಕುಂಭತ್ತಿ, ಎಂ.ಕೆ. ಭಟ್ಟ ಯಡಳ್ಳಿ ಹಲವರು ಸಲಹೆ- ಸೂಚನೆ ನೀಡಿದರು. ಪ್ರಮುಖರಾದ ನರಸಿಂಹ ಕೋಣೆಮನೆ, ವೆಂಕಟ್ರಮಣ ಬೆಳ್ಳಿ, ನಾಗೇಶ ಹೆಗಡೆ ಪಣತಗೇರಿ, ಹೇರಂಭ ಹೆಗಡೆ ಕುಂದರಗಿ, ಸಂತೋಷ ಭಟ್ಟ ಹಳವಳ್ಳಿ, ಟಿ.ಆರ್. ಹೆಗಡೆ ತೊಂಡೆಕೆರೆ, ಉಮೇಶ ಭಾಗ್ವತ, ಸುಬ್ಬಣ್ಣ ಬೋಳ್ಮನೆ, ಭಾಸ್ಕರ ಸಿದ್ದಿ, ಚೆನ್ನಪ್ಪ ಗೌಡ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಅಲೆದಾಟ ತಪ್ಪಿಸಲು ಪ್ರಜಾಸೇವೆ ಆಂದೋಲನ: ಶಾಸಕ ಆರ್.ವಿ. ದೇಶಪಾಂಡೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆತ್ಮಾವಲೋಕನ ಅಗತ್ಯ