ಬಳ್ಳಾರಿ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.
ಬಳ್ಳಾರಿ: ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಗುರುವಾರ ಪ್ರತಿಭಟನೆ ಜರುಗಿತು.
ಆಮೆಗತಿಯಲ್ಲಿ ಸಾಗುತ್ತಿರುವ ಎಲ್ಲ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಬಳ್ಳಾರಿಯ ರಸ್ತೆಗಳ ತುಂಬ ಗುಂಡಿಗಳು ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿಯಿದ್ದು ಕೂಡಲೇ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕು. ನಿತ್ಯ ನಗರದಲ್ಲಿ ಸಂಚರಿಸುವ ಭಾರೀ ವಾಹನಗಳ ಸಂಚಾರ ತಡೆಯಲು ತುರ್ತಾಗಿ ವರ್ತುಲ ರಸ್ತೆ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ನೇತೃತ್ವ ವಹಿಸಿದ್ದ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಸೋಮಶೇಖರ ಗೌಡ ಮಾತನಾಡಿ, ನಗರದ ಜನತೆಗೆ ಮೂಲ ಸೌಕರ್ಯಗಳಿಲ್ಲದೇ ಒದ್ದಾಡುವ ಸ್ಥಿತಿಯಿದೆ. ಏತನ್ಮಧ್ಯೆ ನಗರದ ನಾನಾ ಕಡೆ ಕೈಗೊಂಡಿರುವ ವೃತ್ತ ಅಗಲೀಕರಣ ಕಾಮಗಾರಿಗಳು ಅತ್ಯಂತ ನಿಧಾನವಾಗಿ ನಡೆದಿದೆ. ಇದು ಸಾರ್ವಜನಿಕರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಬೀದಿನಾಯಿಗಳ ಹಾವಳಿ, ಕುಡಿವ ನೀರಿನಲ್ಲಿ ಚರಂಡಿನೀರು ಮಿಶ್ರಿಣ ಸೇರಿದಂತೆ ಹತ್ತಾರು ಸಮಸ್ಯೆಗಳು ಜನರನ್ನು ಬಾಧಿಸಿವೆ. ಜಿಲ್ಲಾಡಳಿತ ಈಗಾಗಲೇ ಶುರುಗೊಳಿಸಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಾರ್ವಜನಿಕರ ಪರದಾಟವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯೆ ನಾಗರತ್ನ, ಬಳ್ಳಾರಿಯಲ್ಲಿ ವೃತ್ತಗಳು ಹಾಗೂ ರಸ್ತೆ ನಿರ್ಮಾಣ ಹೆಸರಿನಲ್ಲಿ ತಿಂಗಳುಗಟ್ಟಲೇ ಕಾಮಗಾರಿ ನಡೆಸಲಾಗುತ್ತಿದೆ. ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳುವ ಬದಲು ಏಕಕಾಲದಲ್ಲಿ ನಾನಾ ಕಡೆ ಕೆಲಸಗಳನ್ನು ಆರಂಭಿಸಿರುವುದರಿಂದ ಜನ ಸಂಚಾರಕ್ಕೆ ಅಡಚಣೆಯಾಗಿದೆ. ಯೋಜನಾಬದ್ಧವಾಗಿ ಕಾಮಗಾರಿ ನಡೆಸುತ್ತಿಲ್ಲವಾದ್ದರಿಂದ ಜನರ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ರಸ್ತೆ, ವೃತ್ತಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಧೂಳು ನಿಯಂತ್ರಿಸಲು ಪೂರಕ ಕ್ರಮಗಳನ್ನು ವಹಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಸದಸ್ಯ ಮಂಜುನಾಥ್, ಶ್ಯಾಮಸುಂದರ್, ಗುರುರಾಜ್, ಗೋಪಾಲ ಕೃಷ್ಣ, ವೀರೇಶ್, ಆಥೋನಿ ಸೇರಿದಂತೆ ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಮನವಿಪತ್ರವನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.