ರಾಮಾಯಣ- ಮಹಾಭಾರತ ಮಹಾಕಾವ್ಯಗಳ ಚಾರಿತ್ರಿಕ ಸಂಗತಿಗಳು ಜನರಿಗೆ ಮನವರಿಕೆಯಾಗಲಿ

KannadaprabhaNewsNetwork |  
Published : Oct 12, 2025, 01:01 AM IST
ಸಂಡೂರು ತಾಲೂಕು ಎಂ.ರಾಮಸಾಗರ ಗ್ರಾಮದಲ್ಲಿ ಶ್ರೀಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ವತಿಯಿಂದ ಶ್ರೀಕೃಷ್ಣದೇವರಾಯ ತೊಗಲುಗೊಂಬೆ ಪ್ರದರ್ಶನ ಜರುಗಿತು.  | Kannada Prabha

ಸಾರಾಂಶ

ಚಿತ್ರಣ ಕಟ್ಟಿಕೊಡುವ ತೊಗಲುಗೊಂಬೆ ಪ್ರದರ್ಶನಗಳು ಗ್ರಾಮೀಣ ಪರಿಸರದಲ್ಲಿ ಆಗಾಗ್ಗೆ ಜರುಗಬೇಕು.

ಬಳ್ಳಾರಿ: ರಾಮಾಯಣ ಹಾಗೂ ಮಹಾಭಾರತದಂತಹ ಮಹಾಕಾವ್ಯಗಳ ಕುರಿತು ಸಮಗ್ರ ಚಿತ್ರಣ ಕಟ್ಟಿಕೊಡುವ ತೊಗಲುಗೊಂಬೆ ಪ್ರದರ್ಶನಗಳು ಗ್ರಾಮೀಣ ಪರಿಸರದಲ್ಲಿ ಆಗಾಗ್ಗೆ ಜರುಗಬೇಕು. ಇದರಿಂದ ಗ್ರಾಮೀಣರಲ್ಲಿ ರಾಮಾಯಣ ಹಾಗೂ ಮಹಾಭಾರತ ಸೇರಿದಂತೆ ಅನೇಕ ಚಾರಿತ್ರಿಕ ಸಂಗತಿಗಳು ಜನರಿಗೆ ದಟ್ಟವಾಗಿ ಮನವರಿಕೆಯಾಗುತ್ತದೆ ಎಂದು ಸಂಡೂರು ತಾಲೂಕು ಎಂ.ರಾಮಸಾಗರ ಗ್ರಾಮದ ಮುಖಂಡ ಎನ್.ಶ್ರೀರಾಮುಲು ತಿಳಿಸಿದರು.

ಗ್ರಾಮದ ಬಯಲು ವೇದಿಕೆಯಲ್ಲಿ ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳ ಟ್ರಸ್ಟ್ ನ ಲಕ್ಷ್ಮೀದೇವಿ ಮತ್ತವರ ತಂಡದಿಂದ ನಡೆದ "ಶ್ರೀಕೃಷ್ಣದೇವರಾಯ ತೊಗಲುಗೊಂಬೆ ಪ್ರದರ್ಶನ " ಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಹಿಂದಿನಿಂದಲೂ ಗ್ರಾಮೀಣ ಭಾಗದಲ್ಲಿ ತೊಗಲುಗೊಂಬೆ ಪ್ರದರ್ಶನ ನೀಡುವ ಪ್ರತೀತಿಯಿದೆ. ಈ ಹಿಂದೆ ಬರಗಾಲ ಎದುರಾದಾಗ ತೊಗಲುಗೊಂಬೆ ಪ್ರದರ್ಶನ ಮಾಡಿಸುವುದರಿಂದ ಸಮೃದ್ಧವಾಗಿ ಮಳೆ ಬರುತ್ತದೆ ಎಂಬ ನಂಬಿಕೆಯಿತ್ತು. ಹೀಗಾಗಿ ಸಾರ್ವಜನಿಕರೇ ತೊಗಲುಗೊಂಬೆ ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನ ಏರ್ಪಡಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಪಾರಂಪರಿಕ ಕಲಾ ಪ್ರಕಾರಗಳು ಮರೆಯಾಗಿವೆ. ವಿಶಿಷ್ಟ ಕಲಾ ಪ್ರಕಾರವಾದ ತೊಗಲುಗೊಂಬೆಯನ್ನು ಪ್ರೋತ್ಸಾಹಿಸುವುದರಿಂದ ಮಾತ್ರ ಅವು ಉಳಿಯಲು ಸಾಧ್ಯ. ಯಾವುದೇ ಕಲಾ ಪ್ರಕಾರವನ್ನು ಉಳಿಸಿ, ಬೆಳೆಸುವುದು ಬರೀ ಸರ್ಕಾರದ ಜವಾಬ್ದಾರಿಯಲ್ಲಿ ಜನಸಮುದಾಯ ಸಹ ಜೊತೆಗೂಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಶ್ರೀಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷ ವೈ.ಪ್ರಭು ಅವರು ಕಲಾ ಟ್ರಸ್ಟ್‌ನ ಮುಖ್ಯ ಉದ್ದೇಶಗಳು ಹಾಗೂ ತೊಗಲುಗೊಂಬೆ ಕಲಾ ಪ್ರಕಾರದ ಬೆಳವಣಿಗೆಗೆ ಪೂರಕವಾದ ಕಾರ್ಯರೂಪಗಳ ಕುರಿತು ತಿಳಿಸಿದರು.

ಗ್ರಾಮದ ಮುಖಂಡರಾದ ಮಲ್ಲಯ್ಯ, ಸಣ್ಣ ಮಾರೆಣ್ಣಗಚ್ಚಿನ ಮನೆ, ಕುಮಾರಸ್ವಾಮಿ, ಸಾಹುಕಾರ ದೊಡ್ಡ ಎರ್ರಿಸ್ವಾಮಿ, ಕೆ.ಶಿವ ಶಂಕರ್, ಗ್ರಾಪಂ‌ ಮಾಜಿ ಸದಸ್ಯ ಲಿಂಗಾರೆಡ್ಡಿ, ಪೂಜಾರಿ ಚಿತ್ತಯ್ಯ, ಸಣ್ಣಎರ್ರಿಸ್ವಾಮಿ, ರಘುಪತಿ, ಬಜ್ಜಪ್ಪ ಮತ್ತಿತರರಿದ್ದರು. ದೊಡ್ಡ ಬಸವಗವಾಯಿ ಡಿ.ಕಗ್ಗಲ್ ಅವರ ಸಂಗೀತ ನಿರ್ದೇಶನದಲ್ಲಿ ಕೆ.ಜಗದೀಶ್ ರಚನೆಯ ಶ್ರೀಕೃಷ್ಣದೇವರಾಯ ತೊಗಲುಗೊಂಬೆ ಪ್ರದರ್ಶನಗೊಂಡಿತು. ಸೂರ್ಯ ಕಲಾ ಟ್ರಸ್ಟ್ ಅಧ್ಯಕ್ಷ ಅಭಿಷೇಕ್ ಮತ್ತು ತಂಡದವರ ಸಮೂಹ ನೃತ್ಯ ಗಮನ ಸೆಳೆಯಿತು. ಟ್ರಸ್ಟ್ ನ ಕಾರ್ಯದರ್ಶಿ ಪಿ. ರೇಖಾ, ಕೆ.ಹೊನ್ನೂರಸ್ವಾಮಿ ಹಾಗೂ ವೈ.ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ