ಹೊನ್ನಾವರ: ಕಾಕ್ರೋಚ್ ಪಕ್ಷದ ಹೆಸರಿನಲ್ಲಿ ದೆಹಲಿಯಲ್ಲಿ ನಡೆದ ಹೋರಾಟವು ಅರಾಜಕತೆ ಸೃಷ್ಟಿಸುವ ಹುನ್ನಾರವಾಗಿದೆ. ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ವಿ. ಸುನೀಲಕುಮಾರ್ ಆರೋಪಿಸಿದರು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಸಂಘರ್ಷಕ್ಕಿಳಿಯಬೇಕು. ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ. ಮೂರು ವರ್ಷದಿಂದ ಒಂದೆ ಒಂದು ರೇಶನ್ ಕಾರ್ಡ್ ನೀಡಿಲ್ಲ. ನಾಲ್ಕು ತಿಂಗಳಿನಿಂದ ಪಿಂಚಣಿ ಬಂದಿಲ್ಲ. ಶಾಲೆ ಆರಂಭವಾಗಿ ಎರಡು ತಿಂಗಳು ಕಳೆದರೂ ಪಠ್ಯಪುಸ್ತಕ ವಿತರಿಸಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದ ಎಲ್ಲ ಯೋಜನೆಯನ್ನು ಕೈ ಬಿಟ್ಟು, ಗ್ಯಾರಂಟಿಯನ್ನು ಸರಿಯಾಗಿ ನೀಡದೇ ಆಡಳಿತ ನಡೆಸುತ್ತಿದೆ. ಸರ್ಕಾರದ ಈ ಎಲ್ಲ ಧೋರಣೆಯ ವಿರುದ್ಧ ಯುವ ಮೋರ್ಚಾ ಹೋರಾಟಕ್ಕೆ ಮುಂದಾಗಬೇಕು ಎಂದರು.
ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಸಂಘಟನೆಯವರು ಉತ್ತಮವಾಗಿ ಕಾರ್ಯನಿರ್ವಹಿಸಿ, ಪಕ್ಷ ಜಿಲ್ಲೆಯಲ್ಲಿ ಸಂಘಟಿತವಾಗಲು ಶ್ರಮಿಸುತ್ತಿದ್ದಾರೆ ಎಂದರು.ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಅನುದಾನ ನೀಡುವಾಗ ಬಿಜೆಪಿ ಶಾಸಕರಿಗೆ ತಾರತಮ್ಯ ಮಾಡುತ್ತಿದೆ. ರಾಜ್ಯದ ಸಚಿವ ಸತೀಶ ಜಾರಕಿಹೊಳಿ ಅನುದಾನ ನೀಡಲು ಬಂದಾಗ ಕುಮಟಾದ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿ ಅನುದಾನ ನೀಡಲು ತಡೆ ಹಿಡಿಯುವ ಕೆಲಸ ಮಾಡಿದರು ಎಂದರು.
ಯುವ ಸಮುದಾಯ ಡ್ರಗ್ಸ್ ದುಶ್ಚಟದಿಂದ ದೂರವಿಡಲು ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಅಧ್ಯಕ್ಷತೆ ವಹಿಸಿದ್ದರು. ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಿವಾನಂದ ಮರಾಠಿ ಪ್ರಾಸ್ತಾವಿಕವಾಗಿ ಮಾತನಾಡಿದರು.