ಕನ್ನಡಪ್ರಭ ವಾರ್ತೆ ಬೀದರ್
ಹುಮನಾಬಾದ್ ಕ್ಷೇತ್ರದಲ್ಲಿ ಹಲವು ದಿನಗಳಿಂದ ಸ್ಥಳೀಯ ಶಾಸಕರು, ಅಲ್ಲಿನ ವಿಧಾನ ಪರಿಷತ್ ಸದಸ್ಯರು ಹಾಗೆಯೇ ಇವರ ಕುಟುಂಬಸ್ಥರ ಮಧ್ಯ ಒಂದಿಲ್ಲೊಂದು ವಿಚಾರವಾಗಿ ವಾಗ್ದಾಳಿ ಮುಂದುವರಿಯುತ್ತಲೇ ಇದ್ದು, ಸರ್ಕಾರದ ಕಾರ್ಯಕ್ರಮವೊಂದರಲ್ಲಿನ ಬ್ಯಾನರ್ ಮೇಲೆ ಫೋಟೋ ಅಳವಡಿಕೆ ಕುರಿತಂತೆ ಕಿರಿ ಕಿರಿ ಆರಂಭವಾಗಿ ಅವಾಚ್ಯ ಶಬ್ಧಗಳ ಸರಣಿಯೇ ಇತ್ತು. ಪರಿಸ್ಥಿತಿ ಕೈಮೀರುವ ಮುನ್ಸೂಚನೆ ಪಡೆದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವಂತಾಯಿತು.ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ ಕುಡಿವ ನೀರಿನ ಪೈಪ್‌ಲೈನ್ ಅಳವಡಿಸುವುದು ಮತ್ತು ನಳಗಳ ಜೋಡಣೆ ಕಾಮಗಾರಿಯ ಭೂಮಿ ಪೂಜೆಯ ಕಾರ್ಯಕ್ರಮದ ವೇದಿಕೆಗೆ ಅಳವಡಿಸಿದ್ದ ಬ್ಯಾನರ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಫೋಟೋಗಳು ಒಂದು ಸಾಲಿನಲ್ಲಿದೆ. ಕೆಳಗಡೆ ದೊಡ್ಡ ಗಾತ್ರದಲ್ಲಿ ಸ್ಥಳೀಯ ಶಾಸಕ ಡಾ. ಸಿದ್ದು ಪಾಟೀಲ್ ಭಾವಚಿತ್ರವಿತ್ತು. ಇದಕ್ಕೆ ಆಕ್ಷೇಪಿಸಿದ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಅವರ ಬೆಂಬಲಿಗರು ಇದೇ ಕ್ಷೇತ್ರದಿಂದ ಪ್ರತಿನಿಧಿಸುತ್ತಿರುವ ಈ ಇಬ್ಬರ ಫೋಟಗಳನ್ನೂ ಹಾಕಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಇಬ್ಬರೂ ವಿಧಾನ ಪರಿಷತ್ ಸದಸ್ಯರು, ತಮ್ಮದೂ ಭಾವಚಿತ್ರ ಬ್ಯಾನರ್ ಮೇಲೆ ಹಾಕಿಲ್ಲ. ವೇದಿಕೆಗೆ ಅಳವಡಿಸಿದ ಬ್ಯಾನರ್ ತೆರವುಗೊಳಿಸುವಂತೆ ಪಟ್ಟುಹಿಡಿದರು. ಇದಕ್ಕೆ ಶಾಸಕ ಡಾ. ಸಿದ್ದು ಪಾಟೀಲ್ ಪ್ರೋಟೋಕಾಲ್ ಪ್ರಕಾರ ಬ್ಯಾನರ್ ಸಿದ್ಧಪಡಿಸಲಾಗಿದೆ ಎಂದು ತಮ್ಮ ಮೊಬೈಲ್‌ಗೆ ಬಂದಿರುವ ಸಂದೇಶವನ್ನು ಓದಿ ತಿಳಿಸಿದರು.ಈ ಸಂದರ್ಭ ಮಾತಿನ ಚಕಮಕಿ ಅವಾಚ್ಯ ಶಬ್ಧಗಳಿಗೂ ವಿಸ್ತರಿಸಿತಲ್ಲದೆ ಆಕ್ರೋಶ ಎಲ್ಲರಲ್ಲಿ ಹೆಚ್ಚಾಗ ತೊಡಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತೆರಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಿಪಿಐ ಗುರು ಪಾಟೀಲ್ ಇಬ್ಬರೂ ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಕರೆದುಕೊಂಡು ಹೋದರು.
ಗ್ರಾಪಂನ ಕೆಲ ಸದಸ್ಯರ ಸಮ್ಮುಖದಲ್ಲಿ ಶಾಸಕರು ಜೆಜೆಎಂ ಕಾಮಗಾರಿಗೆ ಚಾಲನೆ ನೀಡಿದರು. ಸ್ಥಳಕ್ಕೆ ಡಿವೈಎಸ್‌ಪಿ ಜೆಎಸ್ ನ್ಯಾಮೇಗೌಡರ, ಹಳ್ಳಿಖೇಡ (ಬಿ) ಪಿಎಸ್‌ಐ ಸುನೀತಾ, ಸಂಚಾರ ಪಿಎಸ್‌ಐ ಅಯ್ಯಪ್ಪ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅನೀಲ ಪಸರ್ಗಿ, ಪರಮೇಶ್ವರ ಕಾಳಮದರಗಿ, ವಿರೇಶ ಸಜ್ಜನ, ಶಾಮಸುಂದರ ಕಾಳೇಕರ, ರಾಮಣ್ಣ ನರಸಗೊಂಡೆ, ಚಂದ್ರಮ್ಮ ಬೇಳಕೇರಾ ವೇದಿಕೆಯ ಮೇಲೆ ಇದ್ದರು.